ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕರೆ

ಪಾವಗಡ, ಡಿ. ೪- ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಅನಿಲ್‌ಕುಮಾರ್ ಜಯಗಳಿಸಲು ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಹೇಳಿದರು.
ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಜೆಡಿಎಸ್ ಘಟಕದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಅನಿಲ್‌ಕುಮಾರ್ ಜಯಶೀಲರಾದರೆ ಗ್ರಾಮ ಸ್ವರಾಜ್ಯ ಕಲ್ಪನೆಗೆ ಹೆಚ್ಚು ಒತ್ತು ಸಿಗುತ್ತದೆ. ಹಾಗಾಗಿ ಡಿ. ೧೦ ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಮತ್ತು ಹೆಚ್ಚಿನ ಮತ ಗಳಿಸಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಅನಿಲ್‌ಕುಮಾರ್ ಮಾತನಾಡಿ, ನಾನು ಇದೇ ಜಿಲ್ಲೆಯ ಮಗ. ಸರ್ಕಾರಿ ಅಧಿಕಾರಿಯಾಗಿ ದಕ್ಷವಾಗಿ ಕಾರ್ಯನಿರ್ವಹಿಸಿದ್ದೇನೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕೊಟ್ಟಿರುವ ಅವಕಾಶದಿಂದ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯದಲ್ಲೂ ಯಶಸ್ವಿಯಾಗಿ ಉತ್ತಮ ಜನಸೇವೆ ಮಾಡುತ್ತೇ ಎಂದರು.
ಮುಂದಿನ ದಿನಮಾನಗಳಲ್ಲಿ ಜೆಡಿಎಸ್ ಪಕ್ಷ ತೊರೆಯುವುದಿಲ್ಲ. ಅವಕಾಶ ಮಾಡಿಕೊಟ್ಟ ಪಕ್ಷದಲ್ಲಿ ಇದ್ದುಕೊಂಡು ಪಕ್ಷಕ್ಕಾಗಿ ಮತ್ತು ಜನಸೇವೆಗಾಗಿ ದುಡಿಯುತ್ತೇನೆ. ಹಾಗಾಗಿ ಎಲ್ಲಾ ಮತದಾರರು ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಕೋರಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ, ಮುಖಂಡರಾದ ಚಿಂತಲಯ್ಯ, ಈಶ್ವರಪ್ಪ, ಸೊಗಡು ವೆಂಕಟೇಶ್, ಎಸ್.ಕೆ. ರೆಡ್ಡಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಪದ್ಮಕ್ಕ ಓಬಳೇಶ್, ಹೋಬಳಿ ಜೆಡಿಎಸ್ ಅಧ್ಯಕ್ಷ ಜಿ.ಬಿ. ಸತ್ಯನಾರಾಯಣ, ಎ.ಓ.ನಾಗರಾಜು, ಸತ್ಯನಾರಾಯಣ ಚೌದರಿ, ಮಾನಂ ವೆಂಕಟಸ್ವಾಮಿ, ಈರಣ್ಣ, ರಾಜಶೇಖರಪ್ಪ, ಅಂಬಿಕಾ ರಮೇಶ್, ಗೋವಿಂದಬಾಬು, ರಾಮಕೃಷ್ಣಪ್ಪ, ವಾಲ್ಯಾನಾಯ್ಕ, ಮಣಿ, ಸಾಯಿಸುಮ ಮತ್ತಿತರರು ಭಾಗವಹಿಸಿದ್ದರು.