ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ನಾಮಪತ್ರ ಸಲ್ಲಿಕೆ

ಕೆ.ಆರ್.ಪೇಟೆ.ಏ.20:ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹೆಚ್.ಟಿ.ಮಂಜು ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಚುನಾವಣಾಧಿಕಾರಿಗಳ ಕಛೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿ ನಂತರ ಪಟ್ಟಣದ ದರ್ಗಾಭವನ್ ಸರ್ಕಲ್‍ನಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿರುವ ಒಬ್ಬ ರೈತನ ಮಗನಾದ ನನ್ನನ್ನು ಪಕ್ಷ ಗುರುತಿಸಿ ದೇವೇಗೌಡರು, ಕುಮಾರಣ್ಣ, ರೇವಣ್ಣ, ಪುಟ್ಟರಾಜಣ್ಣ ಸೇರಿದಂತೆ ಹಲವು ನಾಯಕರು ನನಗೆ ಟಿಕೆಟ್ ನೀಡಿದ್ದಾರೆ. 3-4 ತಿಂಗಳಿನಿಂದ ನೀವೆಲ್ಲರೂ ನನಗೆ ಅಪಾರವಾದ ಪ್ರೀತಿ ತೋರಿಸಿದ್ದೀರಿ. ಹಗಲು ರಾತ್ರಿ ಎನ್ನದೇ ನನಗೆ ಮತ್ತು ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾ ಬಂದಿದ್ದೀರಿ. ಗಡಿಗಳಲ್ಲಿ ದೇಶವನ್ನು ರಕ್ಷಿಸುವ ಯೋಧರಂತೆ ನನಗೆ ಹಾಗೂ ಜೆಡಿಎಸ್ ಪಕ್ಷಕ್ಕೆ ರಕ್ಷಣೆ ನೀಡುತ್ತಾ ಬಂದಿರುವುದಕ್ಕೆ ನಾನು ನಿಮಗೆ ಚಿರ ಋಣಿಯಾಗಿರುತ್ತೇನೆ. ತಾಲ್ಲೂಕಿನಲ್ಲಿ ಜೆಡಿಎಸ್ ಎಷ್ಟು ಬಲಿಷ್ಟವಾಗಿದೆ ಎಂಬುದನ್ನು ಇಂದು ನೀವು ಸಾಬೀತುಪಡಿಸಿದ್ದೀರಿ. ಎಲ್ಲಾ ಸಮುದಾಯದವರೂ ಸಹ ನನಗೆ ಬೆಂಬಲ ಸೂಚಿಸಿರುವುದಕ್ಕೆ ನಾನು ನಿಮ್ಮೆಲ್ಲರಿಗೂ ಆಬಾರಿಯಾಗಿದ್ದೇನೆ. ನನಗೆ ನೀವೆಲ್ಲರೂ ಆಶೀರ್ವಾದ ಮಾಡಲು ಬದ್ದರಾಗಿದ್ದೀರಿ. ಮುಂದಿನ ದಿನಗಳಲ್ಲಿ ನೀವು ನೀಡಿದ ಮತಕ್ಕೆ ಅಗೌರವ ಬಾರದಂತೆ ನಡೆದುಕೊಳ್ಳುತ್ತೇನೆ. ತಿಂಗಳಿನ 25 ದಿನಗಳಲ್ಲಿ ನಿಮ್ಮೊಂದಿಗೆ ಇದ್ದು ನಿಮ್ಮ ಕಷ್ಟಸುಖಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.
ನಾಮಪತ್ರ ಸಲ್ಲಿಕೆಗೂ ಮುಂಚೆ ತಮ್ಮ ಮನೆದೇವರು ಹೊಸಹೊಳಲು ಗ್ರಾಮದ ಶ್ರೀಕೋಟೆಬೈರವೇಶ್ವರಸ್ವಾಮಿ. ಪಟ್ಟಣದ ಗಣಪತಿ ದೇವಾಲಯ, ಸಾಸಲು ಶಂಭುಲಿಂಗೇಶ್ವರ ದೇವಾಲಯಗಳಿಗೆ ಹೆಚ್.ಟಿ.ಮಂಜು ದಂಪತಿಗಳು ತೆರಳಿ ವಿಶೇಷಪೂಜೆ ಸಲ್ಲಿಸಿದರು. ನಂತರ ಪಟ್ಟಣದ ಶ್ರೀರಂಗ ಚಿತ್ರಮಂದಿರದ ಬಳಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಜೆಡಿಎಸ್ ಪಕ್ಷದ ಮುಖಂಡರುಗಳು ಅಪಾರ ಜನಸ್ತೋಮದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು ಜೆಡಿಎಸ್ ಮುಖಂಡರಾದ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಎಂ.ಬಿ.ಹರೀಶ್, ಎ.ಆರ್.ರಘು, ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ನಾಮಪತ್ರ ಸಲ್ಲಿಕೆಯ ವೇಳೆ ತಮ್ಮ ಧರ್ಮಪತ್ನಿ ರಮಾಮಂಜು, ರಾಜ್ಯ ಮಾರಾಟಮಹಾ ಮಂಡಳದ ನಿರ್ದೇಶಕ ಚೋಳೇನಹಳ್ಳಿಪುಟ್ಟಸ್ವಾಮಿಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಜೊತೆಗೂಡಿ ಚುನಾವಣಾಧಿಕಾರಿಗಳ ಕಛೇರಿಗೆ ಆಗಮಿಸಿದ ಅವರು ಚುನಾವಣಾಧಿಕಾರಿ ಕೃಷ್ಣಕುಮಾರ್ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ನಿಸರ್ಗಪ್ರಿಯ ಹಾಜರಿದ್ದರು.