ಜೆಡಿಎಸ್ ಅಧಿಕಾರ ಸಂಕಲ್ಪಕ್ಕೆ ಮನವಿ

ಚನ್ನಪಟ್ಟಣ.ಮಾ೬:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಾಶ್ವತವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ರೈತಪರ, ಜನಪರ ಮುಖ್ಯಮಂತ್ರಿ ಎಂದು ಜಿಲ್ಲೆ ಮತ್ತು ನಾಡಿನಲ್ಲಿ ಜನಪ್ರಿಯತೆಗಳಿಸಿರುವ ಅವರನ್ನು ಮತ್ತೊಮ್ಮೆ ಬೆಂಬಲಿಸಿ ರಾಜಕೀಯ ಶಕ್ತಿ ನೀಡಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ತಾಲ್ಲೂಕಿನ ಸ್ವಾಭಿಮಾನಿ ಜನತೆ ಸಂಕಲ್ಪ ಮಾಡಬೇಕು ಎಂದು ಮಾಗಡಿ ಶಾಸಕರು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮನವಿ ಮಾಡಿದರು.
ತಾಲ್ಲೂಕಿನ ಕೂಡ್ಲೂರು ಬಳಿಯ ಖಾಸಗಿ ಶಿಶಿರಾ ರೆಸಾರ್ಟ್‌ನಲ್ಲಿ ಕರೆದಿದ್ದ ನಗರ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರೇ ಪಕ್ಷದ ಶಕ್ತಿ, ಆಸ್ತಿ. ತಾಲ್ಲೂಕಿನಲ್ಲಿ ೫೪೦ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ, ರಸ್ತೆ, ಶಾಲಾ ಕಾಲೇಜು ಕಟ್ಟಡ,ಆಸ್ಪತ್ರೆ ಇನ್ನು ಮುಂತಾದ ಶಾಶ್ವತವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಜನರ ಕಷ್ಟ ಸುಖಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರಿಯತೆ ಗಳಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್,ಡಿ. ಕುಮಾರಸ್ವಾಮಿ ಅವರನ್ನು ಪಡೆದಿರುವ ತಾಲ್ಲೂಕಿನ ಜನತೆ ನಿಜಕ್ಕೂ ಪುಣ್ಯವಂತರು. ಈ ಬಾರಿ ಕುಮಾರಣ್ಣನವರು ಮುಖ್ಯಮಂತ್ರಿ ಆಗುವುದು ಶತಸಿದ್ಧ. ಅವರು ಮುಖ್ಯಮಂತ್ರಿ ಆದರೆ ತಾಲ್ಲೂಕಿನ ಮುಖಂಡರು ಮತ್ತು ಕಾರ್ಯಕರ್ತರಿಗೆ ಉಜ್ವಲ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಸಿ.ಅಶ್ವಥ್ ಮಾತನಾಡಿ ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುವುದಾಗಿ ಹೇಳಿರುವುದನ್ನು ಮತದಾರರಿಗೆ ತಿಳಿಸಿ ಗೆಲುವು ತಂದು ಕೊಡುವ ಮೂಲಕ ಅವರಿಗೆ ರಾಜಕೀಯ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ಮಾತನಾಡಿ ನಮ್ಮ ನಾಯಕರಾದ ಬಡವರು, ರೈತಪರವಾದ ಪಂಚ ಯೋಜನೆಗಳನ್ನು ಮುಂದೆ ಇಟ್ಟುಕೊಂಡು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಇದೇ ಅವರಿಗೂ ನಮಗೂ ಇರುವ ವ್ಯತ್ಯಾಸ ಎಂದು ಕಿಡಿಕಾರಿದರು. ಜೆಡಿಎಸ್ ಬಡವರು, ರೈತರ ಪಕ್ಷ. ಹಿಂದೆ ಯಾರೂ ಮಾಡದ ಅಭಿವೃದ್ಧಿ ಕೆಲಸಗಳನ್ನು
ತಾಲ್ಲೂಕಿಗೆ ಮಾಡಿದ್ದಾರೆ. ರಾಜ್ಯದಲ್ಲೇ ಮಾದರಿ ತಾಲ್ಲೂಕನ್ನಾಗಿ ಮಾಡಲು ಸಂಕಲ್ಪ ಮಾಡಿದ್ದಾರೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಮತದಾರರ ಮನವೊಲಿಸಿ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ನಗರ ಜೆಡಿಎಸ್ ಅಧ್ಯಕ್ಷರನ್ನಾಗಿ ಮಳೂರು ಅಜಯಕುಮಾರ್ ಅವರನ್ನು ನೇಮಕ ಮಾಡಿರುವುದಾಗಿ ಜಿಲ್ಲಾಧ್ಯಕ್ಷ ಶಾಸಕ ಎ.ಮಂಜುನಾಥ್ ಘೋಷಣೆ ಮಾಡಿ ಅಭಿನಂದಿಸಿದರು. ಪಕ್ಷದ ಮುಖಂಡರಾದ ಎಂ.ಸಿ.ಕರಿಯಪ್ಪ, ಜಬೀವುಲ್ಲಾಖಾನ್ ಘೋರಿ. ಹೆಚ್. ಎಲ್.ಪಾರ್ಥಸಾರಥಿ, ಹಲವು ಮುಖಂಡರು, ಸ್ನೇಹಿತರು ಹಿತೈಷಿಗಳು ಅಜೇಯಕುಮಾರ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಜೆಡಿಎಸ್ ಮುಖಂಡರಾದ ತಾ.ಪಂ.ಮಾಜಿ ಅಧ್ಯಕ್ಷ ತಿಟ್ಟಮಾರನಹಳ್ಳಿ ನಾಗೇಶ್, ವಡ್ಡರಹಳ್ಳಿ ರಾಜಣ್ಣ ಮಾತನಾಡಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಶಕ್ತಿ ನೀಡಲು ನಾವೆಲ್ಲರೂ ಅವಿರತವಾಗಿ ಶ್ರಮಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಮಹದೇವು, ನಾರಾಯಣ (ಕಂಠಿ) ಜೆಡಿಎಸ್ ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ರಘುಕುಮಾರ್, ಶಶಿಕುಮಾರ್, ಎಂ.ಜಿ.ಕೆ.ಪ್ರಕಾಶ್, ರೇಖಾ ಉಮಾಶಂಕರ್, ಎಂ.ಎಂ.ಸತೀಶ್‌ಕುಮಾರ್, ಲೋಕೇಶ್ ಸೇರಿದಂತೆ ಹಲವರು ಇದ್ದರು.