ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ

ರಾಯಚೂರು,ಏ.೬- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತೇವೆ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಎನ್. ಶಿವಶಂಕರ ಪಕೀಲರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರಕಾರ ರಾಯಚೂರಿನಲೇ ಏಮ್ಸ್ ಸ್ಥಾಪನೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿದೆ.
ಐಐಟಿ ತಪ್ಪುವಲ್ಲಿ ಕಾಂಗ್ರೆಸ್ ಕೂಡಾ ಪಾಲುದಾರ ಪಕ್ಷವಾಗಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಐಐಟಿಗೆ ಕೇವಲ ರಾಯಚೂರು ನಗರವನ್ನು ಸೇರಿಸದೆ ಹುಬ್ಬಳ್ಳಿ ಧಾರವಾಡ ಹೆಸರು ಸೇರ್ಪಡೆ ಮಾಡಿ ಐಐಟಿಯನ್ನು ಧಾರವಾಡಕ್ಕೆ ಮಂಜೂರು ಮಾಡಿ ಜಿಲ್ಲೆಗೆ ಅನ್ಯಾಯ ಮಾಡಿತು. ಈಗಲೂ ಅಷ್ಟೇ ಏಮ್ಸ್ ವಿಚಾರದಲ್ಲೂ ಎರಡು ರಾಜಕೀಯ ಪಕ್ಷಗಳು ಜನರ ನಂಬಿಕೆಯನ್ನು ಹುಸಿ ಮಾಡಿದ್ದು, ಜೆಡಿಎಸ್ ಪಕ್ಷವೂ ಏಮ್ ಹೋರಾಟಕ್ಕೆ ಬೆಂಬಲಕ್ಕೆ ನಿಲ್ಲುತ್ತದೆ. ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಏಮ್ಸ್ ಸ್ಥಾಪನೆ ವಿಚಾರವನ್ನು ಸೇರ್ಪಡೆ ಮಾಡಲಾಗುವುದು. ಈ ಕುರಿತು ಮಾಜಿ ಮುಖ್ಯಮಂತ್ರಿ
ಕುಮಾರಸ್ವಾಮಿಯವರನ್ನು ಏಮ್ಸ್ ಹೋರಾಟ ಸಮಿತಿ ಸದಸ್ಯರ ನಿಯೋಗ ಭೇಟಿ ನೀಡಿದಾಗ ಈ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದ ಅವರು, ಏಮ್ಸ್ ಹೋರಾಟ ಸಮಿತಿಯವರು ಬಹಿರಂಗವಾಗಿ ಎರಡು ರಾಷ್ಟ್ರೀಯ ರಾಜಕೀಯಪಕ್ಷಗಳಿಗೆ ಓಟ್ ನೀಡಬಾರದೆಂದು ಜನರಲ್ಲಿ ಮನವಿ ಮಾಡಿಕೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಯೂಸೂಫ್ ಖಾನ್, ಮಹಿಳಾ ಜಿಲ್ಲಾಧ್ಯಕ್ಷೆ ಫಾತಿಮಾ, ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ವಿಶ್ವನಾಥಪಟ್ಟಿ ನರಸಿಂಹಲು ಇದ್ದರು.