ಜೆಡಿಎಸ್‌ಗೆ ಸಭಾಪತಿ ಪಟ್ಟ ಬಿಜೆಪಿಗೆ ಉಪ-ಸಭಾಪತಿ

ಬೆಂಗಳೂರು,ಜ.೨೭- ವಿಧಾನ ಪರಿಷತ್‌ನ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನವನ್ನು ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಬೆಳಿಗ್ಗೆ ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಎಲ್ಲರೂ ಚರ್ಚಿಸಿ ಸಭಾಪತಿ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಡುವಂತೆ ಕೇಳೋಣ ಎಂದು ಮಾತುಕತೆ ನಡೆಸಿದ್ದೇವೆ. ಉಪ ಸಭಾಪತಿ ಸ್ಥಾನವನ್ನು ಬಿಜೆಪಿಗೆ ಬಿಡುವ ಬಗ್ಗೆಯೂ ಚರ್ಚೆ ನಡೆಸಿದೆ ಎಂದರು.
ಈ ವಿಚಾರವಾಗಿಯೇ ಇಂದು ಯಡಿಯೂರಪ್ಪರವರನ್ನು ಭೇಟಿ ಮಾಡಿ ದೇವೇಗೌಡರ ಅಭಿಪ್ರಾಯ ತಿಳಿಸಿದ್ದೇನೆ. ಮುಖ್ಯಮಂತ್ರಿಗಳು ಬಿಜೆಪಿಯ ವಿಧಾನ ಪರಿಷತ್ ಸದಸ್ಯರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ ನೋಡೋಣ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಎಂದರು.
ಸಭಾಪತಿ ಸ್ಥಾನದ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜತೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ ಎಂದ ಅವರು, ಸಭಾಪತಿ ಸ್ಥಾನಕ್ಕೆ ತಮ್ಮ ಬಯೋಡೆಟಾ ಕಳುಹಿಸುವಂತೆ ನಡ್ಡಾ ಅವರು ಕೇಳಿದ್ದರು. ಅದರಂತೆ ಬಯೋಡೆಟಾ ಕಳುಹಿಸಿದ್ದೇನೆ. ಎಲ್ಲರೂ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದರು.
ಉಪ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆಯೂ ಆಗಿಲ್ಲ. ನಿರ್ಧಾರವೂ ಆಗಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.