
ನಗರದ ಪದ್ಮನಾಭನಗರದ ನಿವಾಸದಲ್ಲಿಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ರಾಜ್ಯ ವಿಧಾನಸಭೆ ಚುನಾವಣೆ ಕರುನಾಡ ಜನತೆಗೆ ಜೆಡಿಎಸ್ ಪರಿಹಾರ ಪತ್ರವನ್ನು ಬಿಡುಗಡೆ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬಿ.ಎಂ.ಫಾರೂಕ್, ಟಿ.ಎ.ಶರವಣ ಇದ್ದಾರೆ.
ಬೆಂಗಳೂರು,ಏ.೧೫: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರವಸೆಯ ಪತ್ರವನ್ನು ಬಿಡುಗಡೆ ಮಾಡಿದೆ. ದೇವೇಗೌಡರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಈ ಭರವಸೆಯ ಪತ್ರವನ್ನು ಬಿಡುಗಡೆ ಮಾಡಿದರು.
ಜೆಡಿಎಸ್ ಮುಂದಿನ ಚುನಾವಣೆಗೆ ಪ್ರಣಾಳಿಕೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಇಂದು ೧೨ ಭರವಸೆಯ ಪತ್ರವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು.
ಜೆಡಿಎಸ್ ಬಿಡುಗಡೆ ಮಾಡಿರುವ ಭರವಸೆಗಳಲ್ಲಿ
ಮಾತೃಶ್ರೀ ಮಹಿಳಾ ಸಬಲೀಕರಣ, ಕನ್ನಡವೇ ಮೊದಲು, ರೈತ ಚೈತನ್ಯ, ಹಿರಿಯ ನಾಗರಿಕರಿಗೆ ಸನ್ಮಾನ, ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ವಿಕಲ ಚೇತನರಿಗೆ ಆಸರೆ, ಆರಕ್ಷಕರಿಗೆ ಅಭಯ, ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ, ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆ, ಯುವಜನ ಸಬಲೀಕರಣ, ವೃತ್ತಿನಿರತ ವಕೀಲರ ಅಭ್ಯುದಯ ಅಂಶಗಳು ಇವೆ.
ಭರವಸೆ ಪತ್ರ ಬಿಡುಗಡೆಗೂ ಮುನ್ನ ಪತ್ರವನ್ನು ದೇವರ ಮುಂದಿಟ್ಟು ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಬಿ.ಎಂ ಫಾರೂಕ್, ಟಿ.ಎ. ಶರವಣ ಉಪಸ್ಥಿತರಿದ್ದರು.