ಜೆಡಿಎಸ್‌ನತ್ತ ಷಫಿ ಅಹಮದ್ ಚಿತ್ತ..

ತುಮಕೂರು, ಏ. ೨೬- ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತುಮಕೂರು ನಗರ ಕ್ಷೇತ್ರದಿಂದ ತಮ್ಮ ಅಳಿಯನಿಗೆ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಷಫಿಅಹಮದ್ ಮನೆಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಭೇಟಿ ನೀಡಿ ಚರ್ಚಿಸಿದ ಬೆನ್ನಲ್ಲೆ ಷಫಿ ಅಹಮದ್ ಅವರು ಜೆಡಿಎಸ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ೪೦ ವರ್ಷಕ್ಕಿಂತ ಅಧಿಕ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ಹಿರಿಯ ನಾಯಕ ಎಸ್. ಷಫಿಅಹಮದ್ ಜೆಡಿಎಸ್‌ನತ್ತ ಮುಖ ಮಾಡಿರುವುದು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬುದು ಕೆಲ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ನಗರದ ಷಫಿಅಹಮದ್ ಅವರ ಮನೆಗೆ ಸಿ.ಎಂ. ಇಬ್ರಾಹಿಂ ಅವರು ನಿನ್ನೆ ಭೇಟಿ ನೀಡಿ ಕೆಲ ಹೊತ್ತು ರಾಜಕೀಯವಾಗಿ ಚರ್ಚೆ ನಡೆಸಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು ಎಂದು ಹೇಳಲಾಗಿದೆ.
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಷಫಿಅಹಮದ್ ಹಾಗೂ ಅಳಿಯ, ಮಾಜಿ ಶಾಸಕ ಡಾ. ರಫೀಕ್ ಅಹಮದ್ ಅವರು ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಕ್ಬಾಲ್ ಅಹ್ಮದ್ ಅವರು ಇಬ್ಬರು ನಾಯಕರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಸ್ಪಂದನೆ ಸಿಕ್ಕಿರಲಿಲ್ಲ ಎನ್ನಲಾಗಿದ್ದು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಈ ನಾಯಕರುಗಳು ಕಾಣಿಸಿಕೊಳ್ಳದೆ ಎಲ್ಲರಿಂದ ದೂರವೇ ಉಳಿದಿದ್ದಾರೆ.
ಅಳಿಯನಿಗೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಷಫಿಅಹಮದ್ ಈಗಾಗಲೇ ರಾಜೀನಾಮೆ ನೀಡಿದ್ದರು. ನಂತರ ರಾಜ್ಯಮಟ್ಟದ ನಾಯಕರು ಬಂದು ಮನವೊಲಿಸಿದ್ದರು. ಕೊನೆಗೆ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿಯಾಗಿ ಸಮಾಧಾನ ಪಡಿಸಿದ್ದರು. ಇಕ್ಬಾಲ್ ಅಹ್ಮದ್ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳುವ ಬಗ್ಗೆಯೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಷಫಿಅಹಮದ್ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಾಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರ ಸಮ್ಮುಖದಲ್ಲಿ ಷಫಿಅಹಮದ್ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.