ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ:ಎಚ್‌ಡಿಕೆ

ಗೌರಿಬಿದನೂರು : ನಗರದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದರು.
ಈ ವೇಳೆ ನೆರೆದಿದ್ದ ಬಾರೀ ಜನಸ್ತೋಮದ ನಡುವೆ ಪಕ್ಷದ ಅಧಿಕೃತ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಯವರಿಗೆ ಮತ ನೀಡುವಂತೆ ಮನವಿ ಮಾಡಿ ಅವರು ಮಾತನಾಡಿದರು.
ಈ ನಾಡಿನ ಮಹಿಳೆಯರು, ರೈತರು, ಯುವಕರ ನೋವನ್ನು ಅರಿತಿದ್ದೇನೆ. ಈ ಹಿನ್ನೆಲೆಯಲ್ಲಿ ಪಂಚರತ್ನ ಯೋಜನೆಯನ್ನು ಜಾರಿಗೆ ತರುವ ಸಂಕಲ್ಪ ಮಾಡಿದ್ದು, ನಾಡಿನ ಆರೂವರೆ ಕೋಟಿ ಜನತೆಯ ಆಶೀರ್ವಾದ ಪಡೆಯಲು ಮುಂದಾಗಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಸಿ.ಆರ್.ನರಸಿಂಹಮೂರ್ತಿ ಮತ್ತು ಸಿ.ಮಂಜುನಾಥರೆಡ್ಡಿಯ ಜೊತೆಗೂಡಿ ೧೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ಪ್ರತೀ ಹಳ್ಳಿಯಲ್ಲಿ ನೀವುಗಳು ತೋರಿದ ಪ್ರೀತಿ, ವಿಶ್ವಾಸವನ್ನು ಮರೆಯಲು ಸಾಧ್ಯವಿಲ್ಲ. ಕ್ಷೇತವು ಇಡೀ ರಾಜ್ಯದಲ್ಲಿ ಅತ್ಯಂತ ಬಡತನದಿಂದ ಕೂಡಿದ ತಾಲ್ಲೂಕಾಗಿದೆ. ಇಲ್ಲಿನ ಜನರು ಸಂಕಷ್ಟಗಳನ್ನು ಅರಿತಿದ್ದೇನೆ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸ್ಥಳೀಯ ಗ್ರಾ.ಪಂ ವ್ಯಾಪ್ತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಭಿಸಿ ಶ್ರೀಮಂತರ ಮಕ್ಕಳಿಗೆ ಸಮನಾದ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತೇವೆ.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಹಣದಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಸುಮಾರು ೪೦ ಕ್ಕೂ ಹೆಚ್ಚು ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಪ್ರತೀ ರೈತರಿಗೆ ಎಕರೆಗೆ ೧೦ ಸಾವಿರದಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಪ್ರೋತ್ಸಾಹಧನ ಹಾಗೂ ಭೂಮಿ ಇಲ್ಲದ ಕಾರ್ಮಿಕರಿಗೆ ಪ್ರತೀ ತಿಂಗಳಿಗೆ ೨ ಸಾವಿರ ನೀಡುವ ಚಿಂತನೆ ಮಾಡಲಾಗಿದೆ. ಮಹಿಳೆಯರಿಗೆ ಸ್ಥಳೀಯವಾಗಿ ತರಬೇತಿ ನೀಡಿ ಸ್ವಾವಲಂಭಿ ಬದುಕಿಗೆ ನೆರವಾಗಿ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಮನೆಯಿಲ್ಲದವರಿಗೆ ?೫ ಲಕ್ಷ ವೆಚ್ಚದಲ್ಲಿ ಸರ್ಕಾರದಿಂದ ಉಚಿತವಾಗಿ ಮನೆ ಕಟ್ಟಿಸಿಕೊಡಲಾಗುವುದು. ವಯೋವೃದ್ದರಿಗೆ ೫ ಸಾವಿರ ಪಿಂಚಣಿ, ವಿಧವೆಯರಿಗೆ ೨.೫ ಸಾವಿರ ಪಿಂಚಣಿ ನೀಡುವ ಜತೆಗೆ ಸ್ತ್ರೀಶಕ್ತಿ ಸ್ವಸಹಾಯ ಸಂಘದಲ್ಲಿನ ಮಹಿಳೆಯರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದರು.