ಬಜೆಟ್ ಅಧಿವೇಶನಕ್ಕೆ ಕೊರೊನಾ ಕರಿ ನೆರಳು

ನವದೆಹಲಿ,ಜ.೧೫- ಮುಂಬರುವ ಬಜೆಟ್ ಅಧಿವೇಶನಕ್ಕೆ ಕೊರೊನಾ ಕರಿನೆರಳು ಆವರಿಸಿವೆ. ದೇಶದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಒಮಿಕ್ರಾನ್ ರೂಪಾಂತರಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಕಟ್ಟುನಿಟ್ಟಿನ ನಿರ್ಬಂಧ, ಸಾಮಾಜಿಕ ಅಂತರ ಹಾಗೂ ಇನ್ನಿತರ ಶಿಷ್ಟಾಚಾರಗಳನ್ನು ಜಾರಿಗೆ ತರಲು ಲೋಕಸಭಾಧ್ಯಕ್ಷ ಓಂ ಬಿರ್ಲಾ ಮುಂದಾಗಿದ್ದಾರೆ.
ಜ. ೩೧ ರಿಂದ ಆರಂಭವಾಗಲಿರುವ ಮೊದಲ ಹಂತದ ಸಂಸತ್ ಅಧಿವೇಶನ ಫೆ. ೧೧ ರಂದು ಪೂರ್ಣಗೊಳ್ಳಲಿದೆ.
ರಾಷ್ಟ್ರಪತಿ ರಾiನಾಥ್‌ಕೋವಿಂದ್ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ, ಆರ್ಥಿಕ ಸಮೀಕ್ಷೆ, ಆನಂತರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.
ಮಾ. ೧೪ ರಿಂದ ಏ. ೮ರವರೆಗೆ ಮತ್ತೊಂದು ಅವಧಿಯ ಸಂಸತ್ ಅಧಿವೇಶನ ನಡೆಯಲಿದೆ.
ಸಂಸದೀಯ ಇಲಾಖೆಯ ೭೦೦ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ತಗುಲಿರುವುದು ಗಂಭೀರ ವಿಷಯಕ್ಕೆ ಕಾರಣವಾಗಿದೆ. ಜ. ೪ ರಂದು ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಇರುವುದು ದೃಢಪಟ್ಟಿದೆ.
ಮೂಲಗಳ ಪ್ರಕಾರ ೭೧೮ ಮಂದಿ ಸಿಬ್ಬಂದಿಗೆ ಇದುವರೆಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ ರಾಜ್ಯಸಭಾ ಸಚಿವಾಲಯದ ೨೦೪ ಮಂದಿಯೂ ಸೇರಿದ್ದಾರೆ.
ಕಳೆದ ವರ್ಷ ನಡೆದ ಮಳೆಗಾಲದ ಅಧಿವೇಶನದ ವೇಳೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಲೋಕಸಭಾಧ್ಯಕ್ಷರು ಮುಂದಾಗಿದ್ದಾರೆ. ಈ ಅಧಿವೇಶನದಲ್ಲಿ ಜಾರಿಗೆ ತರಲಾದ ಶಿಷ್ಟಾಚಾರವನ್ನೇ ಈ ಬಾರಿ ಅಧಿವೇಶನದಲ್ಲೂ ಜಾರಿಗೆ ತರಲು ಸಂಸತ್‌ನ ಉಭಯ ಸದನಗಳಲ್ಲಿ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅದಿರ್ ರಂಜನ್ ಚೌಧರಿ ಪ್ರತಿಕ್ರಿಯೆ ನೀಡಿ ದೇಶದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಕೋವಿಡ್ ಪ್ರಕರಣಗಳು ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಸರ್ಕಾರ ಜಾರಿಗೆ ತಂದಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ.
ಈ ಹಿಂದೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಮತ್ತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಉಭಯ ಸದನಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಸೋಂಕು ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಬಜೆಟ್ ಅಧಿವೇಶನ ಸುರಕ್ಷಿತವಾಗಿ ನಡೆಯಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.