ಜೂ.9ರಿಂದ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ಸಮ್ಮೇಳನ

ಬೆಳಗಾವಿ, ಜೂ1: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಜೂ.9 ರಿಂದ ಮೂರು ದಿನಗಳ ಕಾಲ ನೆಹರು ನಗರದ ಕೆಎಲ್‍ಇ ಸಂಸ್ಥೆಯ ಡಾ.ಎಚ್.ಬಿ.ರಾಜಶೇಖರ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ಕಾರ್ಯಾಗಾರ ನಡೆಯುತ್ತಿದೆ. 9 ರಂದು ಆಗಮಿಸುವ ಅಂತಾರಾಷ್ಟ್ರೀಯ ಪತ್ರಕರ್ತರಿಗೆ ಸ್ಥಳೀಯ ಪ್ರವಾಸಿತಾಣಗಳಿಗೆ ಕರೆದೊಯ್ಯಲಾಗುವುದು. 10 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್.ರಂಗನಾಥ, ವಿಆರ್‍ಎಲ್‍ಗ್ರುಪ್ ಪ್ರಧಾನ ವ್ಯವಸ್ಥಾಪಕ ಆನಂದ ಸಂಕೇಶ್ವರ, ಅತಿಥಿಗಳಾಗಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಪಟು ಸನತ್ ಜಯಸೂರ್ಯ, ಉದ್ಯಮಿ ಸಂಜಯ ಘೋಡಾವತ್, ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಭೋವೆಂಕಾ ಹರ್ಥ, ಶ್ರೀಲಂಕಾ ಪ್ರವಾಸೋದ್ಯಮ ನಿಗಮದ ಚೇರಮನ್ ಛಲಕಾ ಗಜಬಾಹು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕನ್ನಡಪ್ರಭ ಪತ್ರಿಕೆ ಸಮನ್ವಯ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಆಗಮಿಸುವರು.
ಪರಿಸರ ಹಾಗೂ ಮಾಧ್ಯಮ ಚಿಂತನಾಗೋಷ್ಠಿ ನಡೆಯಲಿದೆ. ದಕ್ಷಿಣ ಕೋರಿಯಾದ ಹಿರಿಯ ಪತ್ರಕರ್ತೆ ಗೀತಿಕಾ ತಾಲೂಕದಾರ,ಲಂಡನ್ ಹಿರಿಯ ಪತ್ರಕರ್ತ ಫಾತೂಮ್, ಶ್ರೀಲಂಕಾ ಉಪುಲ್ ಜಯಸಿಂಘೆ. ನೇಪಾಲದ ಸೌಜ್ಞಾ ಪೌಡೇಲ್, ಕರ್ನಾಟಕದ ಡಾ.ಗೀತಾ ಕಿರಣ, ಬಾಂಗ್ಲಾದೇಶದ ಮೊಹಮ್ಮದ ಶಾಮೇಮ್ ಸೇರಿದಂತೆ 30 ದೇಶಗಳಿಂದ ಪತ್ರಕರ್ತರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಸಮ್ಮೇಳನದಲ್ಲಿ ದೇಶ, ವಿದೇಶಗಳಿಂದ ಸುಮಾರು 600 ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು.
ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಅವರು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಶೈಲ ಮಠದ, ನೌಶಾದ ಬಿಜಾಪುರೆ, ಮಂಜುನಾಥ ಪಾಟೀಲ, ಶ್ರೀಕಾಂತ ಕುಬಕಡ್ಡಿ, ಪ್ರಧಾನ ಕಾರ್ಯದರ್ಶಿ ಅರುಣ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.