ಜೂ.4 ಸಚಿವ ಕೆ.ಎಚ್.ಮುನಿಯಪ್ಪಗೆ ಅಭಿನಂದನೆ

ಕೋಲಾರ,ಜೂ,೯:ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರು ಆಗಿರುವ ಕೋಲಾರದ ಮಾಜಿ ಸಂಸದರೂ ಆದ ಕೆ.ಎಚ್.ಮುನಿಯಪ್ಪ ಅವರನ್ನು ಜೂ.೪ ರಂದು ಮಧ್ಯಾಹ್ನ ೧೨ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅವರ ಅಭಿಮಾನಿ ಬಳಗದಿಂದ ನಗರದ ರಂಗಮಂದಿರದಲ್ಲಿ ಅದ್ದೂರಿಯಾಗಿ ಸನ್ಮಾನಿಸಲು ತೀರ್ಮಾನಿಸಲಾಯಿತು.
ಈ ಸಂಬಂಧ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಸಾದ್‌ಬಾಬು, ಉದಯಶಂಕರ್ ಮತ್ತಿತರರ ನೇತೃತ್ವದಲ್ಲಿ ಬುಧವಾರ ನಡೆದ ಅಭಿನಂದನಾ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವ ಕೆ.ಎಚ್.ಮುನಿಯಪ್ಪ ಅವರು ಮೊದಲಿಗೆ ಬೆಳಗ್ಗೆ ೯-೩೦ ಗಂಟೆಗೆ ನಗರ ಹೊರವಲಯದ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಲಿದ್ದು, ಅಲ್ಲಿ ಪೂಜೆ ಸಲ್ಲಿಸುವರು ಇದಾದ ನಂತರ ನೇರವಾಗಿ ಬಂಗಾರಪೇಟೆ ವೃತ್ತಕ್ಕೆ ಆಗಮಿಸಿ ಅಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವರು.
ಇದಾದ ನಂತರ ಎಂಜಿ ರಸ್ತೆಯಲ್ಲಿನ ಮಹಾತ್ಮಾಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಅವರು, ಅಲ್ಲಿಂದ ನೇರವಾಗಿ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸುವರು.
ಬಾಬಾ ದೇವಾಲಯದಿಂದ ಕ್ಲಾಕ್ ಟವರ್‌ನಲ್ಲಿನ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದು, ಅಲ್ಲಿಂದ ನೇರವಾಗಿ ಮೆಥೋಡಿಸ್ಟ್ ಚರ್ಚ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುವರು.
ಇದಾದ ನಂತರ ಮಧ್ಯಾಹ್ನ ೧೨ ಗಂಟೆಗೆ ರಂಗಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು, ಕೆ.ಎಚ್.ಮುನಿಯಪ್ಪ ಅವರ ಅಭಿಮಾನಿಗಳು, ಪಕ್ಷದ ವಿವಿಧ ಘಟಕ, ವಿಭಾಗಗಳ ಪದಾಧಿಕಾರಿಗಳು ಹಾಜರಿರುವರು.
ಪೂರ್ವಸಿದ್ದತಾ ಸಭೆಯಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಎಸ್ಸಿ ನಗರ ಅಧ್ಯಕ್ಷ ರಾಮಯ್ಯ, ಎಸ್ಟಿ ಬ್ಲಾಕ್ ಅಧ್ಯಕ್ಷ ರಮೇಶ್‌ನಾಯಕ್, ಮುಖಂಡರಾದ ಲಾಲ್‌ಬಹುದ್ದೂರು ಶಾಸ್ತ್ರಿ, ಜಗ್ನು ಅಸ್ಲಾಂ, ಇಕ್ಬಾಲ್ ಅಹಮದ್, ಸಜ್ಜಾದ್, ಶಿವಕುಮಾರ್ ಸೇರಿದಂತೆ ಪಕ್ಷದ ಯುವ ಘಟಕ ಮತ್ತಿತರ ವಿಭಾಗಗಳ ಪದಾಧಿಕಾರಿಗಳು ಹಾಜರಿದ್ದರು.