ಧಾರವಾಡ,ಜೂ.2: ತಾಲೂಕಿನ ಅಮ್ಮಿನಬಾವಿ ಗ್ರಾಮದ ಗ್ರಾಮದೇವತೆಯರಾದ ಶ್ರೀ ದುರ್ಗಾಮಾತೆ ಮತ್ತು ಶ್ರೀದ್ಯಾಮವ್ವ ಮಾತೆಯರ ಜಾತ್ರಾಮಹೋತ್ಸವದ 5ನೇ ವಾರ್ಷಿಕೋತ್ಸವ ಜೂನ್ 4 ರಂದು (ರವಿವಾರ) ಕಾರಹುಣ್ಣಿಮೆಯ ದಿನ ಜರುಗಲಿದೆ.
ಪ್ರತೀ 30 ವರ್ಷಗಳಿಗೊಮ್ಮೆ ಜರುಗುವ ಅಮ್ಮಿನಬಾವಿ ಗ್ರಾಮದೇವತೆಯರ ಜಾತ್ರೆ 2018 ರ ಕಾರಹುಣ್ಣಿಮೆಯಂದು ಜರುಗಿತ್ತು. ಆ ಸಂದರ್ಭದಲ್ಲಿ ಸುಂದರ ವಿನ್ಯಾಸದಲ್ಲಿ ಕಲ್ಲಿನಿಂದಲೇ ಹೊಸದಾಗಿ ಗ್ರಾಮದೇವತೆಯರ ದೇವಾಲಯ ನಿರ್ಮಾಣ ಮಾಡಿದ್ದರಿಂದ ಜಾತ್ರೆ ಜರುಗಿದ ನಂತರ 5 ನೇ ವರ್ಷದಲ್ಲಿ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಿದಂತೆ ಪ್ರಸ್ತುತ ಜೂನ್ 4 ರಂದು ಕಾರಹುಣ್ಣಿಮೆಯ ದಿನವೇ ಈ ಧಾರ್ಮಿಕ ಸಮಾರಂಭ ಜರುಗುತ್ತಿದೆ.
ಜೂನ್ 4 ರಂದು ಪ್ರಾತಃಕಾಲ ಉಭಯ ಗ್ರಾಮದೇವತೆಯರಿಗೆ ನೂತನಾಂಬರ ಮತ್ತು ಬೆಳ್ಳಿಯ ಕಿರೀಟ ಧಾರಣೆ, ಪುಷ್ಪಾಲಂಕಾರ ಮಹಾಪೂಜೆ ನಡೆಯುವುದು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ
(ಶ್ರೀಶಾಂತೇಶ್ವರ ಮಠದ) ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪರಂಪರೆಯಂತೆ ತಮ್ಮ ಶ್ರೀಮಠದ ಪರವಾಗಿ ಮುಂಜಾನೆ 7-30 ಗಂಟೆಗೆ ಉಭಯ ಗ್ರಾಮದೇವತೆಯರಿಗೆ ಮೊದಲನೆಯ ಉಡಿ ತುಂಬುವರು. ಗ್ರಾಮದೇವತಾ ಆರಾಧನಾ ಪರಂಪರೆಯಂತೆ ನಂತರದಲ್ಲಿ ಗ್ರಾಮದ ದೇಸಾಯಿ ಮನೆತನ, ದೇಶಪಾಂಡೆ ಮನೆತನ ಹಾಗೂ ಇತರೇ ಕಟ್ಟಿಮನಿ ಹಕ್ಕು- ಬಾಬುಗಳ ಮನೆತನಗಳ ಪರವಾಗಿ ಗ್ರಾಮದೇವತೆಯರಿಗೆ ಉಡಿ ತುಂಬಲಾಗುವುದು.
ಪಲ್ಲಕ್ಕಿ ಉತ್ಸವ : ಹೊಸದಾಗಿ ಪಂಚಲೋಹದಲ್ಲಿ ಸಿದ್ಧಗೊಳಿಸಲಾಗಿರುವ ಶ್ರೀ ದುರ್ಗಾಮಾತೆ ಮತ್ತು ಶ್ರೀ ದ್ಯಾಮವ್ವಮಾತೆಯರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವ ಮುಂಜಾನೆ 8-30 ಗಂಟೆಗೆ ನಡೆಯುವುದು. ಡೊಳ್ಳು ಮತ್ತು ಕರಡಿಮಜಲಿನೊಂದಿಗೆ ದೇವಸ್ಥಾನದ ಸುತ್ತ ಪಲ್ಲಕ್ಕಿಯು 21 ಸುತ್ತು ಹಾಕುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಳ್ಳಲಿದೆ.
ಗ್ರಾಮದೇವತೆಯರ ದೇವಾಲಯದ ಆವರಣದಲ್ಲಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ
(ಶ್ರೀಶಾಂತೇಶ್ವರ ಮಠದ) ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಪಾದಪೂಜೆ ನೆರವೇರಿದ ನಂತರ ಉಭಯ ಶ್ರೀಗಳು ಈ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ದಾಸೋಹ ಸೇವೆಯ ಅನ್ನಸಂತರ್ಣೆಗೆ ಚಾಲನೆ ನೀಡುವರು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಆವರಣದಲ್ಲಿ ಮಹಿಳೆಯರಿಗೆ ಹಾಗೂ ಗ್ರಾಮದೇವತೆಯರ ದೇವಾಲಯಕ್ಕೆ ಹತ್ತಿರ ಇರುವ ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ಪುರುಷರಿಗೆ ಮಹಾಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ರವಿವಾರ (ಜೂ.4) ಸಂಜೆ ಗ್ರಾಮದ ಯುವಕ ಸಂಘಟನೆಗಳ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಎರಡೂ ದಿನಗಳಂದು ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕವಲಗೇರಿ ಹಾಗೂ ಚಂದನಮಟ್ಟಿ ಗ್ರಾಮಗಳ ಸಕಲ ಸದ್ಭಕ್ತರು ಗ್ರಾಮದೇವತೆಯರಿಗೆ ಉಡಿತುಂಬಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಅಮ್ಮಿನಬಾವಿಯ ಶ್ರೀಗ್ರಾಮದೇವತಾ ಜಾತ್ರಾಮಹೋತ್ಸವ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.