ದಾವಣಗೆರೆ, ಜೂ.21; ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ 2022-23ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂ. 25 ರ ಬೆಳಿಗ್ಗೆ 10-30ಕ್ಕೆ ಶ್ರೀಮತಿ ಗೌರಮ್ಮ ನರಹರಿಶೇಟ್ ಸಭಾ ಭವನದಲ್ಲಿ ನಡೆಯಲಿರುವ ಸಮಾರಂಭವನ್ನು ಮುಂಬೈನ ಅಖಿಲ ಭಾರತ ದೈವಜ್ಞ ಸಮಾಜದ ಅಧ್ಯಕ್ಷರಾದ ದಿನಕರ ಶಂಕರ ಬೈಕೇರಿಕರ್ ಉದ್ಘಾಟಿಸಲಿದ್ದು ಪ್ರತಿಷ್ಥಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರಿನ ಘಟಕದ ಅಧ್ಯಕ್ಷರಾದ ಡಾ.ಮಂಜುನಾಥ್ ಎಸ್.ರೇವಣಕರ್, ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ರಾಮನಾಥ ಪ್ರಭುದೇಸಾಯಿ, ದಾವಣಗೆರೆ ದೈವಜ್ಞ ಸಮಾಜದ ನೂತನ ಅಧ್ಯಕ್ಷರಾದ ಪ್ರಶಾಂತ ವಿಶ್ವನಾಥ್ ವರ್ಣೇಕರ್ ಆಗಮಿಸಲಿದ್ದಾರೆ ಕರ್ನಾಟಕದ ವಿವಿದ ಜಿಲ್ಲೆಗಳಿಂದ ಸುಮಾರು 145ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಗಮಿಸಲಿದ್ದು ಅವರನ್ನು ಕನ್ನಡ ಕಂಕಣಕಟ್ಟಿ ಕನ್ನಡಾರತಿ ಬೆಳಗಿ ಕನ್ನಡ ತಿಲಕವಿಟ್ಟು, ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದ ಮೆರವಣಿಗೆಯಲ್ಲಿ ಕರೆತಂದು ವೇದಿಕೆಯ ಪ್ರತ್ಯೇಕವಾಗಿ ಮಂಟಪದ ಸಿಂಹಾಸನದಲ್ಲಿ ಕೂರಿಸಿ ಪುಷ್ಪವೃಷ್ಟಿಯೊಂದಿಗೆ ಮಸ್ತಕದ ಮೇಲೆ ಕಿರೀಟವಿಟ್ಟು, ಸ್ಮರಣಿಕೆ, ಚಿನ್ನದ ಲೇಪನದ ಪದಕ ಹಾಗೂ ಅವರದೇ ಭಾವಚಿತ್ರವಿರುವ ಸನ್ಮಾನಪತ್ರ ನೀಡಿ, ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿ, ಗೌರವಿಸಲಾಗುವುದು ಹಾಗೂ ವೈದ್ಯಕಿಯ, ಸಾಹಿತ್ಯ, ಯುವ ಪ್ರತಿಭೆಗಳ ಸಾಧಕರಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಡಾ. ಸೋನಿಯಾ ದೇವಿದಾಸ್ ಪಾವಸ್ಕರ್, ಸೋನಿಯಾ ರಾಜೇಶ್ ಪಾವಸ್ಕರ್, ಹಾಸನ ಜಿಲ್ಲೆಯ ಅರಸೀಕೆರೆಯ ಸಹನಾ ಬೈರೇಶ್ವರ ಶೇಟ್ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ನಲ್ಲೂರು ಲಕ್ಷ್ಮಣ ರಾವ್ ,ನಲ್ಲೂರು ಅರುಣಾಚಲ ರೇವಣ್ಕರ್,ಪ್ರೇಮಾ ಅರುಣಾಚಲ ರೇವಣ್ಕರ್ ಉಪಸ್ಥಿತರಿದ್ದರು.