ಜೂ.25ರಂದು ವೀರಶೈವ-ಲಿಂಗಾಯತ ಶಾಸಕ-ಸಚಿವರಿಗೆ ಅದ್ಧೂರಿ ಸನ್ಮಾನ ಸಮಾರಂಭ

ಕಲಬುರಗಿ: ಜೂ.4:ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ವೀರಶೈವ-ಲಿಂಗಾಯತ ಸಮುದಾಯದ ಶಾಸಕರು ಹಾಗೂ ಸಚಿವರನ್ನು ಇದೇ ಜೂನ್ 25ರಂದು ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ವತಿಯಿಂದ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಈ ಕುರಿತು ವಿವರ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಅತ್ಯಂತ ಅದ್ಧೂರಿಯಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲು ಇತ್ತೀಚೆಗೆ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಸಮುದಾಯದ ಹಿರಿಯರು ಹಾಗೂ ಮಹಾಸಭಾದ ವಿವಿಧ ಶಾಖೆಗಳ ಪದಾಧಿಕಾರಿಗಳು, ಸದಸ್ಯರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳಿಗೆ ಅನುಗುಣವಾಗಿ ಅಭಿನಂದನಾ ಸಮಾರಂಭವನ್ನು ಅತ್ಯಂತ ಅಚ್ಚುಕಟ್ಟಾಗಿ ಏರ್ಪಡಿಸಲಾಗುತ್ತಿದೆ. ಸಮಾರಂಭದ ಬಳಿಕ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಚಿಂತನ-ಮಂಥನ ನಡೆಯಲಿದೆ ಎಂದು ಸಹ ಮೋದಿ ಹೇಳಿದರು.
ನಿಗಮ ಕ್ರಿಯಾಶೀಲಗೊಳಿಸಿ:
ರಾಜ್ಯದಲ್ಲಿ ಈಗಿರುವ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಸಮುದಾಯದ ಹಿತದೃಷ್ಟಿಯಿಂದ ನಿಗಮಕ್ಕೆ ಕ್ರಿಯಾಶೀಲ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಮೇಲಾಗಿ, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಕ್ರಿಯಾಶೀಲ ಯುವಕರನ್ನು ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಬೇಕೆಂದು ಮೋದಿ ಸಲಹೆ ನೀಡಿದರು.
ಕಾರ್ಯದರ್ಶಿ ಜ್ಯೋತಿ ಮರಗೋಳ, ಶರಣು ಟೆಂಗಳಿ, ಭೀಮಾಶಂಕರ ಮೆಟೇಕರ್, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ಡಾ.ಸುಧಾ ಹಾಲಕಾಯಿ, ಗೌರಿ ಚಿಚಕೋಟಿ ಉಪಸ್ಥಿತರಿದ್ದರು.
ರೂ.2500 ಕೋಟಿ ಮೀಸಲಿಡಿ
ಈ ಹಿಂದಿನ ಸರಕಾರದ ಅವಧಿಯಲ್ಲಿ ಸ್ಥಾಪಿಸಲಾಗಿರುವ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು ಅನುದಾನದ ಕೊರತೆಯಿಂದ ಸೊರಗುತ್ತಿದೆ. ಹೀಗಾಗಿ, ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ನಿಗಮಕ್ಕೆ ರಾಜ್ಯ ಬಜೆಟ್‍ನಲ್ಲಿ ರೂ.2500 ಕೋಟಿ ಅನುದಾನ ಪ್ರತ್ಯೇಕವಾಗಿ ಮೀಸಲಿಡಬೇಕು ಎಂದು ಶರಣಕುಮಾರ್ ಮೋದಿ ಒತ್ತಾಯಿಸಿದರು. ==
ಜುಲೈನಲ್ಲಿ ಹಾಸ್ಟೆಲ್ ಲೋಕಾರ್ಪಣೆ
ಉತ್ತರ ಕರ್ನಾಟಕ ಭಾಗಕ್ಕೆ ಮಾದರಿ ಎನಿಸುವಂತೆ ಕಲಬುರಗಿ ನಗರದಲ್ಲಿ ಇದೇ ಮೊದಲ ಬಾರಿಗೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನಾ ಸಮಾರಂಭ ಜುಲೈ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ್ ಮೋದಿ ಮಾಹಿತಿ ನೀಡಿದರು.
ಹಾಸ್ಟೆಲ್ ಲೋಕಾರ್ಪಣೆ ಸಮಾರಂಭದ ರೂಪುರೇಷೆ ಕುರಿತು ಇಷ್ಟರಲ್ಲೇ ಮತ್ತೊಮ್ಮೆ ಮಹಾಸಭಾ ಸಭೆ ಕರೆಯುವ ಮೂಲಕ ಸಮಗ್ರವಾಗಿ ಚರ್ಚಿಸಿ, ಸಮುದಾಯದ ಹಿರಿಯರ, ಮುಖಂಡರ ಮತ್ತು ಕ್ರಿಯಾಶೀಲ ಯುವಕರ ಸಲಹೆ-ಸೂಚನೆಗಳನ್ನು ಪಡೆಯಲಾಗುವುದು ಎಂದು ಅವರು ಹೇಳಿದರು.