ಜೂ. 21ರಂದು ಅಂತರರಾಷ್ಟ್ರೀಯ ಯೋಗ ದಿನ

ಅಥಣಿ :ಜೂ.18: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪಟ್ಟಣದ ಸಾಯಿ ನಗರದಲ್ಲಿರುವ ಐ ಎಂ ಎ ಸಭಾಂಗಣದಲ್ಲಿ ಪತಂಜಲಿ ಯೋಗ ಪ್ರತಿಷ್ಠಾನ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆಯ ವತಿಯಿಂದ ಪತಂಜಲಿ ಪ್ರಾಣಾಯಾಮ ಹಾಗೂ ಯೋಗ ವಿಜ್ಞಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ತಾಲೂಕಾ ಅಧ್ಯಕ್ಷ ಡಾ. ಸ್ಮಿತಾ ರವಿ ಚೌಗಲಾ ಹೇಳಿದರು.
ಅವರು ಸಾಯಿನಗರದ ಐಎಂಎ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಬರುವ ದಿ. 20 ರವರೆಗೆ ಪ್ರತಿದಿನ ಮುಂಜಾನೆ 6 ರಿಂದ 7 ಗಂಟೆವರೆಗೆ ಯೋಗ ಶಿಬಿರ ನಡೆಯಲಿದೆ. ಸಾಯಿ ನಗರದ ಎಲ್ಲಾ ನಿವಾಸಿಗಳು ಈ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪತಂಜಲಿ ಯೋಗ ಪ್ರತಿಷ್ಠಾನದ ತಾಲೂಕ ಅಧ್ಯಕ್ಷ ಹಾಗೂ ಯೋಗ ಶಿಕ್ಷಕ ಎಸ್ ಕೆ ಹೊಳೆಪ್ಪನವರ ಮಾತನಾಡಿ ಜೂನ್ 21ರಂದು ಆಚರಿಸಲಾಗುವ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಥಣಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಯೋಗ ಶಿಕ್ಷಕರಿಂದ ಶಿಬಿರಗಳನ್ನು ಆಯೋಜಿಸಲಾಗಿದೆ. ಪಟ್ಟಣದ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜೂನ್ 21ರಂದು ಭೋಜರಾಜ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ, ಪತಂಜಲಿ ಯೋಗ ಪ್ರತಿಷ್ಠಾನ ಹಾಗೂ ವಿವಿಧ ಸಂಘಟನೆಗಳಿಂದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಸಿ. ಎ ಸಂಕ್ರಟ್ಟಿ, ಡಾ. ವರ್ಷಾ ಮೇತ್ರಿ, ಡಾ. ವಿಜಯಕುಮಾರ ಚೈನಿ, ಡಾ. ಚಿದಾನಂದ ಮೇತ್ರಿ, ಡಾ. ಪಿ ಪಿ ಮಿರಜ,ಡಾ. ಅವಿನಾಶ ನಾಯಕ, ಡಾ.ಅರುಣಾ ಅಸ್ಕಿ, ಡಾ. ರವಿ ಚೌಗಲಾ, ಡಾ. ವಿಶ್ವನಾಥ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.