ಕಲಬುರಗಿ.ಮೇ.31:ವಿದ್ಯಾರ್ಥಿಗಳು ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿದ್ಯಾರ್ಥಿಗಳಿಗೆ 2023ರ ಜೂನ್ 15 ರವರೆಗೆ ಈ ಕೆಳಕಂಡ ದಾಖಲೆಗಳನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಶಾಲಾ / ಕಾಲೇಜುಗಳಿಗೆ ದಾಖಲಾಗಿರುವ ಸಂಬಂಧದ ಶುಲ್ಕ ಪಾವತಿ ರಶೀದಿ ಹಾಗೂ 2022-23 ನೇ ಸಾಲನ ವಿದ್ಯಾರ್ಥಿ ಬಸ್‍ಪಾಸ್‍ನ್ನು ತೋರಿಸಿ ಬಸ್‍ಗಳನ್ನು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು 2023-24 ನೇ ಸಾಲಿಗೆ ವಿದ್ಯಾರ್ಥಿ ಉಚಿತ/ ರಿಯಾಯಿತಿ ಬಸ್ ಪಾಸ್‍ಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಇಡಿಸಿಎಸ್ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ ಹಾಗೂ ಪಾಸ್ ಪಡೆಯಲು ಕಾಲಾವಕಾಶ ನೀಡಬೇಕಿರುವ ಹಿನ್ನೆಲೆಯಲ್ಲಿ 2023ರ ಜೂನ್ 15 ರವರೆಗೆ ಬಸ್‍ಗಳನ್ನು ಉಚಿತವಾಗಿ ಪ್ರಯಾಣಿಸಲು ಕಾಲಾವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.