ಜೂ. 11 ರಿಂದ ಎಲ್ಲಾ ಮಹಿಳೆಯರು ನಿಗಮದವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ “ಶಕ್ತಿ ಯೋಜನೆ” ಜಾರಿ

ಕಲಬುರಗಿ,ಜೂ.9: “ಶಕ್ತಿ ಯೋಜನೆ”ಯಡಿ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ನಿಗಮಗಳ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಯೋಜನೆಯು 2023ರ ಜೂನ್ 11 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಈ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ), 6-12 ವರ್ಷದ ಬಾಲಕಿಯರು, ಲಿಂಗತ್ವ ಅಲ್ಪಸಂಖ್ಯಾತರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಮಾತ್ರ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ರಾಜ್ಯದೊಳಗೆ ಯಾವುದೇ ದೂರದ ಮಿತಿ ಇರುವುದಿಲ್ಲ. ಐಷಾರಾಮಿ ಬಸ್‍ಗಳಾದ ರಾಜಹಂಸ, ನಾನ್ ಎ.ಸಿ. ಸ್ಲೀಪರ್, ಎ.ಸಿ. ಸ್ಲೀಪರ್, ಸಾರಿಗೆಗಳಲ್ಲಿ ಮತ್ತು ಅಂತರರಾಜ್ಯ ಮಾರ್ಗಗಳ ಸಾರಿಗೆಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಅನ್ವಯಿಸುವುದಿಲ್ಲ. ಅಲ್ಲದೆ ದೈನಿಕ ಪಾಸ್, ಮಾಸಿಕ ಪಾಸ್, ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂ ಗುತ್ತಿಗೆ ಪ್ಯಾಕೇಜ್ ಮುಂತಾದ ಸೇವೆಗಳಿಗೂ ಸಹ ಯೋಜನೆ ಅನ್ವಯಿಸುವುದಿಲ್ಲ.
ನಿಗಮದ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಳಿಗಾಗಿ ಫೋಟೊ ಮತ್ತು ಕರ್ನಾಟಕ ರಾಜ್ಯದ ವಾಸಸ್ಥಳ ನಮೂದಿಸಿರುವ ಈ ಕೆಳಕಂಡ ಮೂಲ ಗುರುತಿನ ಚೀಟಿಗಳನ್ನು ಅಥವಾ ಡಿ.ಜಿ.ಲಾಕರ್ ಮುಖಾಂತರ ಹಾಜರುಪಡಿಸಬೇಕಾಗಿರುತ್ತದೆ. 
  ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು/ ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ/ ಸಂಸ್ಥೆಗಳು (PSU’S) ವಿತರಿಸಿರುವ ಗುರುತಿನ ಚೀಟಿ, ವಾಸಸ್ಥಳ ನಮೂದಿಸಿರುವ ಕರ್ನಾಟಕ ಸರ್ಕಾರದ ಇಲಾಖೆಗಳು/ ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ/ ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಹಾಗೂ ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ದವರು ವಿತರಿಸಿರುವ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ.
   ಸೇವಾ ಸಿಂದೂ ಮೂಲಕ ಶಕ್ತಿ ಸ್ಮಾರ್ಟ ಕಾರ್ಡ ವಿತರಿಸುವವರೆಗೆ ಕರ್ನಾಟಕ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಶೂನ್ಯ ಮೊತ್ತದ ಉಚಿತ ಟಿಕೆಟ್ ಪಡೆಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.