ಕಲಬುರಗಿ,ಜೂ.7:ಹಿರಿಯ ಸಾಹಿತಿ ಸುಭಾಷಚಂದ್ರ ಕಶೆಟ್ಟಿ ಬಾಚಬಾಳ್ ಅವರು 75ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ ಎಸ್.ಎಂ. ಪಂಡಿತ್ ರಂಗ ಮಂದಿರದಲ್ಲಿ ಇದೇ ಜೂನ್ 11ರಂದು ಬೆಳಿಗ್ಗೆ 10-30ಕ್ಕೆ ಸಾತ್ವಿಕ ಅಭಿನಂದನಾ ಸಂಪುಟ ಹಾಗೂ ಐದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸುಭಾಷ್ ಎಸ್. ಕಮಲಾಪುರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನಂದನಾ ಗ್ರಂಥವು 780 ಪುಟಗಳುಳ್ಳ ಬೃಹತ್ ಸಂಪುಟವಾಗಿದ್ದು, ಈ ಸಂಪುಟದಲ್ಲಿ ವ್ಯಕ್ತಿ ಸಂಪದ, ಕೃತಿ ಸಂಪದ, ಕಲ್ಯಾಣ ಕರ್ನಾಟಕ ಸಂಪದ, ಸಂಕೀರ್ಣ ಸಂಪದ ಹಾಗೂ ಚಿತ್ರ ಸಂಪದ ಎಂಬ ಐದು ಭಾಗಗಳಲ್ಲಿ ವಿಂಗಡಿಸಿಕೊಂಡು ವಿದ್ವತ್‍ಪೂರ್ಣ ಲೇಖನಗಳನ್ನು ಒಳಗೊಂಡ ಆಕರ ಗ್ರಂಥ ರೂಪದಲ್ಲಿ ಪ್ರಕಟಗೊಂಡಿದ್ದು, ಅದರ ಬೆಲೆ ಒಂದು ಸಾವಿರ ರೂ.ಗಳಾಗಿದೆ ಎಂದರು.
ಗ್ರಂಥವನ್ನು ದಿವ್ಯ ಸಾನಿಧ್ಯ ವಹಿಸುವ ಹಾರಕೂಡದ ಸಂಸ್ಥಾನ ಮಠದ ಡಾ. ಚನ್ನವೀರ್ ಶಿವಾಚಾರ್ಯರು ಬಿಡುಗಡೆ ಮಾಡುವರು. ಆಳಂದ್ ತಾಲ್ಲೂಕಿನ ಚಿಂಚನಸೂರ್ ಕಲ್ಮಠದ ಸಿದ್ದಮಲ್ಲ ಶಿವಾಚಾರ್ಯರು ಸಾನಿಧ್ಯವನ್ನು ಹಾಗೂ ಶ್ರೀ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಮಾತೋಶ್ರೀ ದಾಕ್ಷಾಯಣಿ ಅಪ್ಪ ಅವರು ನೇತೃತ್ವವನ್ನು ವಹಿಸುವರು. ಉದ್ಘಾಟನೆಯನ್ನು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ವಹಿಸುವರು. ಕಶೆಟ್ಟಿಯವರ ಮೂರು ಕೃತಿಗಳನ್ನು ಶಾಸಕ ಬಿ.ಆರ್. ಪಾಟೀಲ್ ಹಾಗೂ ಕಶೆಟ್ಟಿಯವರ ಎರಡು ಕೃತಿಗಳನ್ನು ಶಾಸಕ ಬಸವರಾಜ್ ಮತ್ತಿಮೂಡ್ ಅವರು ಲೋಕಾರ್ಪಣೆ ಮಾಡುವರು ಎಂದು ಅವರು ಹೇಳಿದರು.
ಹಿರಿಯ ಸಾಹಿತಿ ಶಿವರಾಜ್ ಪಾಟೀಲ್ ಅವರು ಅಭಿನಂದನಾ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಅಪ್ಪಾರಾವ್ ಅಕ್ಕೋಣಿ, ಚಂದ್ರಕಾಂತ್ ಪಾಟೀಲ್, ಡಾ. ಸುಭಾಷ್ ಎನ್. ಕಮಲಾಪುರೆ, ಬಸವರಾಜ್ ಕೋನೆಕ್ ಮುಂತಾದವರು ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಪಾಟೀಲ್, ಡಾ. ಶರಣಬಸಪ್ಪ ವಡ್ಡನಕೇರಿ, ಡಾ. ವಿಜಯಕುಮಾರ್ ಪರೂತೆ ಮುಂತಾದವರು ಉಪಸ್ಥಿತರಿದ್ದರು.