ಕಲಬುರಗಿ,ಜೂ.9: ನಗರದ ಕೆಬಿಎನ್ ಆಡಿಟೋರಿಯಂ ಹಾಲ್‍ನಲ್ಲಿ ಜೂನ್ 11ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸೈಯದ್ ನಜೀರೋದ್ದೀನ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಜೈನ್, ಸಿಖ್, ಕ್ರಿಶ್ಚಿಯನ್ ಮುಂತಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗುವುದು ಎಂದರು.
ಅಲ್ಪಸಂಖ್ಯಾತ ಸಮುದಾಯ ಎಂದರೆ ಕೇವಲ ಮುಸ್ಲಿಂ ಸಮುದಾಯ ಅಷ್ಟೇ ಅಲ್ಲ, ಜೈನರು, ಕ್ರಿಶ್ಚಿಯನ್‍ರು ಮತ್ತು ಸಿಖ್ ಸಮುದಾಯಗಳೂ ಸಹ ಸೇರಿದ್ದು, ಆ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗುವುದು ಎಂದು ಅವರು ಹೇಳಿದರು.
ಪ್ರತಿಭಾ ಪುರಸ್ಕಾರಕ್ಕಾಗಿ ಒಟ್ಟು 26 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, ಅದರಲ್ಲಿ 21 ವಿದ್ಯಾರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಅವರಿಗೆ ಸಮಾರಂಭದಲ್ಲಿ ಪುರಸ್ಕರಿಸಲಾಗುವುದು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಎಂ.ಎಂ. ಬೇಗ್, ಡಾ. ಅಸ್ಲಂ ಸೈಯದ್, ಡಾ. ಸದಾನಂದ್ ಪೆರ್ಲ, ಜನಾಬ್ ಎಡ್.ಎ. ಜಾಗೀರದಾರ್, ಅಬ್ದುಲ್ ವಹೀಬ್ ಮುಲ್ಲಾ, ಅಸದ್ ಅಲಿ ಅನಸಾರಿ, ಶಂಕರ್ ಕೋಡ್ಲಾ, ಕಲ್ಯಾಣಕುಮಾರ್ ಶೀಲವಂತ್, ಶೇಖ್ ಮುಜೀಬ್, ಮೊಹ್ಮದ್ ಮಿನಾಜುದ್ದೀನ್ ಅವರು ಆಗಮಿಸುವರು ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯದ ನೌಕರರು ಹಾಗೂ ನಿವೃತ್ತ ನೌಕರರು ಸಮುದಾಯದ ಕಲ್ಯಾಣಕ್ಕಾಗಿ ಹತ್ತು ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಮುದಾಯದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಮುಂತಾದ ಉನ್ನತ ಹುದ್ದೆಗಳಿಗೆ ಹೋಗಲು ಉಚಿತ ತರಬೇತಿ ಶಿಬಿರಗಳನ್ನು ಸಹ ಏರ್ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಬಾಬಸಾಬ್, ಅಬ್ದುಲ್ ಖಲಿಲ್, ಅಸ್ಲಂ ಅಲಿ ಅನ್ಸಾರಿ ಮುಂತಾದವರು ಉಪಸ್ಥಿತರಿದ್ದರು.