ಜೂ.೮ ರವರೆಗೆ ಇಮ್ರಾನ್ ಜಾಮೀನು ವಿಸ್ತರಣೆ

ಇಸ್ಲಾಮಾಬಾದ್,ಮೇ.೨೩- ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಜೂನ್ ೮ ರವರೆಗೆ ಜಾಮೀನು ನೀಡಿದೆ.
ಹಲವು ಪ್ರಕರಣಗಳಿಗೆ ದೊರೆತ ಜಾಮೀನು
ಅವರ ಬೆಂಬಲಿಗರನ್ನು ಸಮಾಧಾನಪಡಿಸುವದಲ್ಲದೇ ಮಿಲಿಟರಿ ಮತ್ತು ಸರ್ಕಾರದ ಮಧ್ಯೆದ ತಿಕ್ಕಾಟವನ್ನು ಸ್ವಲ್ಪ ಮಟ್ಟಿಗೆ ಶಮನ ಮಾಡಲು ಸಹಕಾರಿ ಆಗಲಿದೆ ಎನ್ನಲಾಗಿದೆ.
ಮಾಜಿ ಕ್ರಿಕೆಟ್ ತಾರೆಗೆ ಜೂನ್ ೮ ರವರೆಗೆ ಜಾಮೀನು ನೀಡಲಾಗಿದೆ ಎಂದು ಅವರ ವಕೀಲ ಮೊಹಮ್ಮದ್ ಅಲಿ ಬೊಖಾರಿ ಇಂದು ದೂರವಾಣಿ ಮೂಲಕ ತಿಳಿಸಿದ್ದಾರೆ.
ಮಂಗಳವಾರ ಖಾನ್ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುತ್ತಿರುವ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಮುಂದೆ ಹಾಜರಾಗಲಿದ್ದಾರೆ.
ಮತ್ತೆ ತಮ್ಮ ಬಂಧನವಾಗುವ ಶಂಕೆಯನ್ನು ಪ್ರತಿಪಕ್ಷದ ನಾಯಕ ವಿಚಾರಣೆಗೂ ಮುನ್ನ ವ್ಯಕ್ತಪಡಿಸಿದ್ದರು.ಒಂದೊಮ್ಮೆ ತಮ್ಮನ್ನು ಬಂಧಿಸಿದರೆ ಶಾಂತಿಯುತವಾಗಿ ಇರುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ.