ಜೂ.೩ ಅತ್ಯಂತ ತೇವಭರಿತ ದಿನ


ಬೆಂಗಳೂರು,ಜೂ.೫- ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ವಾತಾವರಣದಲ್ಲೂ ನಿಧಾನವಾಗಿ ಬದಲಾವಣೆಯಾಗುತ್ತಿದ್ದು ಎರಡು ದಿನಗಳ ಹಿಂದೆ (ಜೂ.೩)ನಗರದಲ್ಲಿ ಸುರಿದ ಮಳೆಯು ದಾಖಲೆ ನಿರ್ಮಿಸಿದೆ.
ಕಳೆದ ೭ ವರ್ಷಗಳಲ್ಲಿ ಜೂನ್ ತಿಂಗಳಲ್ಲಿನ ಅತ್ಯಂತ ತೇವಭರಿತ ದಿನವೆಂಬ ಖ್ಯಾತಿಗೆ ಜೂ.೩ ಪಾತ್ರವಾಗಿದೆ. ಜೂ ೩ರ ಬೆಳಗ್ಗೆ ೮:೩೦ರಿಂದ ಜೂ ೪ರ ಬೆಳಗ್ಗೆ ೮:೩೦ರವರೆಗೆ ೫೨.೪೪ ಮಿಲಿಮೀಟರ್ ಮಳೆಯಾಗಿದ್ದು ಕಳೆದ ೭ ವರ್ಷಗಳಲ್ಲಿ ಜೂನ್ ತಿಂಗಳಲ್ಲಿನ ಅತ್ಯಂತ ತೇವಭರಿತ ದಿನ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಜಿಲ್ಲೆಯಲ್ಲಿ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ದಳದ ೪೯ ಮಳೆ ಅಳತೆ ಕೇಂದ್ರಗಳಿದ್ದು, ಎಲ್ಲಾ ೫ ತಾಲೂಕುಗಳಲ್ಲೂ ಉತ್ತಮ ಮಳೆಯಾಗಿದೆ ಎಂದು ತಿಳಿಸಿದೆ. ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರತೀಯ ಹವಾಮಾನ ಇಲಾಖೆಯ ಮೂರು ಮಳೆ ಅಳತೆ ಕೇಂದ್ರಗಳು ಮಾತ್ರ ಇವೆ.
ಯೆಲ್ಲೋ ಅಲರ್ಟ್:
ರಾಜಧಾನಿಯಲ್ಲಿ ಮುಂದಿನ ೨ ದಿನ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ೩ ದಿನ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿಯ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸೂಚನೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಕರಾವಳಿಯಲ್ಲಿ ನಿನ್ನೆ ವ್ಯಾಪಕ ಮಳೆಯಾಗಿದೆ. ದಕ್ಷಿಣ ಒಳನಾಡಿನ ಎಲ್ಲಾ ಭಾಗಗಳಲ್ಲೂ ಮಳೆ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೧ ಸೆಂಟಿ ಮೀಟರ್ ಮಳೆಯಾಗಿದೆ.
ಭಾರೀ ಮಳೆ ಸಾಧ್ಯತೆ:
ಮಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ ಕೂಡ ೧೧ ಸೆಂಟಿ ಮೀಟರ್ ಮಳೆ ಸುರಿದಿದೆ. ಜೊತೆಗೆ, ಬೆಳಗಾವಿಯಲ್ಲಿ ೯ ಸೆಂಟಿ ಮೀಟರ್ ಮಳೆಯಾಗಿದೆ.
ಕಾರವಾರ, ಬಾದಾಮಿ, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ತಲಾ ೭ ಸೆಂಟಿ ಮೀಟರ್ ಮಳೆ ಆಗಿದೆ. ಮುಂದಿನ ಮೂರು ದಿನಗಳ ಕಾಲ ಈ ಪ್ರದೇಶಗಳಲ್ಲಿ ಜೋರು ಮಳೆಯಾಗುವ ಸಂಭವವಿದೆ ಎಂದು ವರದಿಯಾಗಿದೆ. ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಕರಾವಳಿಯಲ್ಲಿ ಹೆಚ್ಚು ಮಳೆ:
ಕರಾವಳಿಯ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗಲಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚನೆ ಕೊಡಲಾಗಿದೆ. ಮುಂದಿನ ಎರಡು ದಿನ ಬೆಂಗಳೂರಿನಲ್ಲಿಯೂ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.