ಜೂ.೨೭ ಕ್ಕೆ ಎಐಟಿಯುಸಿಯಿಂದ ಪ್ರತಿಭಟನೆ

ದಾವಣಗೆರೆ.ಜೂ.೨೪;  ಆರೋಗ್ಯ ಇಲಾಖೆಯ ಇ- ಸರ್ವೆಯಿಂದ ಮುಕ್ತಗೊಳಿಸಬೇಕೆಂಬುದು ಸೇರಿದಂತೆ  ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ.೨೭ ರಂದು ಬೆಳಗ್ಗೆ ೧೧ ಕ್ಕೆ‌ ಜಯದೇವವೃತ್ತದಲ್ಲಿ ಒಂದು ದಿನದ ಚಳುವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಸಮಿತಿಯ ಅಧ್ಯಕ್ಷೆ ಎಂ.ಬಿ ಶಾರದಮ್ಮ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕಳೆದ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಮೊಬೈಲ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದ್ದು, ಬಹುತೇಕ ಹಾಳಾಗಿದೆ. ಮೊಬೈಲ್‌ಗಳಲ್ಲಿ ಮಾಹಿತಿ ಸಂಗ್ರಹ ಸೇರಿದಂತೆ ಮತ್ತಿತರೆ ಕೆಲಸ ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಇದರೊಂದಿಗೆ  ಆರೋಗ್ಯ ಇಲಾಖೆಯ ಕಾರ್ಯಕ್ರಮವಾದ ಆರೋಗ್ಯ ಸಮೀಕ್ಷೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸಿ ತಮ್ಮ ಮೊಬೈಲ್‌ಗಳಲ್ಲಿ ಮಾಹಿತಿಗಳನ್ನು ಅಪ್ ಲೋಡ್ ಮಾಡಲು ತೀವ್ರ ಒತ್ತಡ ಹೇರಲಾಗುತ್ತಿದೆ. ಈ ಕುರಿತಂತೆ ಹಲವಾರು ಬಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸದೆ ಸಮೀಕ್ಷೆ ಮಾಡದಿದ್ದಲ್ಲಿ ಸಸ್ಪೆಂಡ್ ಮಾಡುವುದಾಗಿ ಗೌರವಧನ ಕಡಿತಗೊಳಿಸುವುದಾಗಿ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ. ಇದು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಡೆಸುವ ಮಾನಸಿಕ ದೌರ್ಜನ್ಯ ಮತ್ತು ಕಿರುಕುಳವಾಗಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆ ಸಮೀಕ್ಷೆಯೂ ಸೇರಿದಂತೆ ಬೇರೆ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು.ಕಳಪೆ ಗುಣಮಟ್ಟದ ಮತ್ತು ಹಾಳಾಗಿರುವ ಮೊಬೈಲ್‌ಗಳನ್ನು ಕೂಡಲೆ ವಾಪಸ್ ಪಡೆದು ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್‌ಗಳನ್ನು ನೀಡಬೇಕು.ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿರುವ ಮೊಟ್ಟೆ ಖರೀದಿಯ ಜವಾಬ್ದಾರಿಯನ್ನು ಬಾಲವಿಕಾಸ ಸಮಿತಿಗೆ ನೀಡಬೇಕು.ಬಹುತೇಕ ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಕಿ ಉಳಿದಿರುವ ಆರುತಿಂಗಳ ಬಾಡಿಗೆ ಹಣ ಕೂಡಲೇ ಬಿಡುಗಡೆ ಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಳುವಳಿ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ ಎಸ್ ಮಲ್ಲಮ್ಮ,ವಿಶಾಲಾಕ್ಷಿ,ಕೆ.ಸಿ ನಿರ್ಮಲ,ಗೀತಾ,ಸರ್ವಮ್ಮ,ಆವರಗೆರೆ ವಾಸು,ಸುಧಾ,ರೇಣುಕಾ ಇದ್ದರು.