ಜೂ.೨೧ ಕ್ಕೆ ಚಾರ್ಟರ್ಡ್ ಅಕೌಂಟೆಂಟ್ಸ್  ಭವನದ ಉದ್ಘಾಟನೆ

ದಾವಣಗೆರೆ.ಜೂ.೧೯; ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಶನ್‌  ವತಿಯಿಂದ ದಾವಣಗೆರೆಯಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಚಾರ್ಟರ್ಡ್ ಅಕೌಂಟೆಂಟ್ಸ್  ಭವನದ ಉದ್ಘಾಟನೆ ಜೂ.೨೧ ರಂದು ಬೆಳಗ್ಗೆ ೧೦.೩೦ ಕ್ಕೆ ಜರುಗಲಿದೆ ಎಂದು  ಸಂಘದ ಗೌರವಾಧ್ಯಕ್ಷ ಅಥಣಿ ಎಸ್ ವೀರಣ್ಣ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಹರಿಹರ ರಸ್ತೆಯಲ್ಲಿರುವ ಶೃತಿ ಮೋಟಾರ್ಸ್ ಹಿಂಭಾಗದ ಸಂಘದ ಕಟ್ಟಡದಲ್ಲಿ ನೆರವೇರಲಿದೆ.ಸಮಾರಂಭದ ಉದ್ಘಾಟನೆಯನ್ನು ಐಡಿಬಿಐ ಬ್ಯಾಂಕಿನ ಅಧ್ಯಕ್ಷರಾದ ಟಿ.ಎನ್ ಮನೋಹರನ್ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ ಸಿದ್ದೇಶ್ವರ್, ಐಸಿಎಐ ಕೇಂದ್ರ ಸಮಿತಿ ಸದಸ್ಯ ಕೋತಾ ಶ್ರೀನಿವಾಸ್,ಐಸಿಎಐ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಪ್ರಮೋದ ಶ್ರೀಹರಿ ಆಗಮಿಸಲಿದ್ದಾರೆ ಎಂದರು. ಸುಮಾರು 25 ಸದಸ್ಯರುಗಳಿಂದ ಪ್ರಾರಂಭವಾಗಿ ಸಂಸ್ಥೆ ಇದೀಗ ಮೂರೂ ಜಿಲ್ಲೆಗಳ ಸದಸ್ಯರುಗಳು ಸೇರಿ ಸುಮಾರು 75 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯ ಮೂಲ ಉದ್ದೇಶ ಸಂಘದ ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಬೇರೆ ಬೇರೆ ವಿಷಯಗಳ ಬಗ್ಗೆ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು ಸೇರಿದಂತೆ ಸದಸ್ಯರ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಹಾಗೂ ವರ್ತಕರಿಗೆ ಸಂಬಂಧಪಟ್ಟ ತೆರಿಗೆ ಕಾನೂನುಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಕಾಲಕಾಲಕ್ಕೆ ತೆರಿಗೆ ಕಾನೂನುಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿಸುವುದಾಗಿದೆ. ಸುಮಾರು ೩ ಕೋಟಿ‌ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 250 ಜನ ಸಾಮರ್ಥದ ಹವಾನಿಯಂತ್ರಿತ ಸಭಾಂಗಣ, ಡಿಜಿಟಲ್ ಲೈಬ್ರರಿ, ಇ-ಲರ್ನಿಂಗ್ ಸೆಂಟರ್, ವಿಶಾಲವಾದ ತರಗತಿ ಕೊಠಡಿ, ಆಡಳಿತ ಕಛೇರಿ ಹಾಗೂ ಇತರ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಭವನದ ಬಗ್ಗೆ ಮಾಹಿತಿ‌ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕಿರಣ್ ಎಲ್ ಪಾಟೀಲ್, ಉಮೇಶ್ ಶೆಟ್ಟಿ, ಬಸವರಾಜ್ ಒಡೆಯರ್,ಎ.ಕಿರಣ್ ಕುಮಾರ್ ಉಪಸ್ಥಿತರಿದ್ದರು.