ಜೂ.೧೨ ಕ್ಕೆ ದೇವದಾಸಿ ಮಹಿಳೆಯರ ಪ್ರತಿಭಟನೆ

ದಾವಣಗೆರೆ.ಜೂ.೨: ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ ಹೆಚ್ಚಳ ಹಾಗೂ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಜೂನ್ ೧೨ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಮತ್ತು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಉಪಾಧ್ಯಕ್ಷೆ ಟಿ.ವಿ. ರೇಣುಕಮ್ಮ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದಾಸಿಯರ ಮಹಿಳೆಯರಿಗೆ ನೀಡುವ ಮಾಸಿಕ ಸಹಾಯಧನವನ್ನು ೫೦೦೦ ರೂಪಾಯಿಗಳಿಗೆ ಹೆಚ್ಚಿಸಬೇಕು, ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು, ಗಣತಿಯಲ್ಲಿ ಬಿಟ್ಟು ಹೋದವರು ಹೆಸರನ್ನು ಸೇರಿಸಬೇಕು ಹಾಗೂ ಅವರ ಮಕ್ಕಳ ಮತ್ತು ಕುಟುಂಬದವರ ಗಣತಿ ಮಾಡಿ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಲಾಗುವುದು ಎಂದರು.ಮದುವೆಯಾದವರಿಗೆ ಪ್ರೋತ್ಸಾಹ ಧನವಾಗಿ ೫ ಲಕ್ಷ ರೂ. ನೀಡಬೇಕು. ಇವರ ಮದುವೆಯ ವಿಚಾರದಲ್ಲಿ ಷರತ್ತುಗಳಿಗೆ ಬಾರದು, ಕೇಂದ್ರ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು  ಸೇರಿದಂತೆ ೧೪ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು.ಈ ಸಂಬಂಧ ಜೂನ್ ೧೨ ರಂದು ಬೆಳಿಗ್ಗೆ ೧೧ ಗಂಟೆಗೆ  ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ಜಿಲ್ಲಾಧ್ಯಕ್ಷೆ ಚೆನ್ನಮ್ಮ, ಸಹ ಕಾರ್ಯದರ್ಶಿಗಳಾದ  ಮೈಲಮ್ಮ, ಮಂಜುಳ ಹಾಗೂ ಜಿಲ್ಲಾ ಕಾರ್ಯದರ್ಶಿ ಆನಂದರಾಜು ಉಪಸ್ಥಿತರಿದ್ದರು.