ಜೂನ್-30ರ ವರೆಗೆ ಲಾಕ್‌ಡೌನ್- ಶೀಘ್ರ ನಿರ್ಧಾರ

ಬೆಂಗಳೂರು,ಮೇ ೨೯- ಕೊರೊನಾ ಸೋಂಕನ್ನು ನಿಗ್ರಹಿಸಲು ಕಠಿಣ ನಿರ್ಬಂಧಗಳು ಮತ್ತು ಕಂಟೈನ್ಮೆಂಟ್ ನಿಯಮಾವಳಿಗಳನ್ನು ಜೂ. ೩೦ರವರೆಗೂ ಮುಂದುವರೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರಾಜ್ಯದಲ್ಲಿ ಲಾಕ್‌ಡೌನ್‌ನನ್ನು ಜೂ. ೭ರ ನಂತರವೂ ಮುಂದುವರೆಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಜೂ. ೫ ರಂದು ನಡೆಯುವ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಲಾಕ್‌ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳುವರು.
ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿದ್ದು, ಸೋಂಕನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಗ್ರಹಿಸಲು ಜೂ. ೭ರ ನಂತರವೂ ಲಾಕ್‌ಡೌನ್‌ನ್ನು ಮುಂದುವರೆಸಲು ಸಚಿವರಾದ ಆರ್. ಅಶೋಕ್, ಡಾ. ಕೆ. ಸುಧಾಕರ್ ಸೇರಿದಂತೆ ಹಲವರು ಒಲವು ತೋರಿದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಬರುವ ಜೂ. ೭ರವರೆಗೂ ಸಮಯವಿದೆ. ಈಗಲೇ ಈ ಬಗ್ಗೆ ತೀರ್ಮಾನ ಬೇಡ. ಪರಿಸ್ಥಿತಿಯನ್ನು ನೋಡಿಕೊಂಡು ಲಾಕ್‌ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಮಾಡೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಜೂ. ೭ರ ನಂತರ ಕನಿಷ್ಠ ೭ ದಿನ ಲಾಕ್‌ಡೌನ್ ಮುಂದುವರೆಸುವ ಸಾಧ್ಯತೆಗಳು ಹೆಚ್ಚಿದೆ.
ರಾಜ್ಯದಲ್ಲಿ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಪಾಸಿಟಿವಿಟಿ ದರ ಶೇ. ೧೭ ರಷ್ಟಿದ್ದು, ಈ ದg ಶೇ. ೫ಕ್ಕೆ ಬಂದರೆ ಸೊಂಕು ನಿಗ್ರಹವಾದಂತೆ. ಹಾಗಾಗಿ, ಪಾಸಿಟಿವಿಟಿ ದರ ಶೇ. ೧೦ಕ್ಕಿಂತ ಕಡಿಮೆ ಬರುವವರೆಗೂ ಲಾಕ್‌ಡೌನ್ ಮುಂದುವರೆಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಲಾಕ್‌ಡೌನ್‌ನ್ನು ಏಕಾಏಕಿ ತೆರವುಗೊಳಿಸಿದರೆ ಸೋಂಕು ಹೆಚ್ಚಾಗಬಹುದೆ. ಹಾಗಾಗಿ, ಜೂ. ೭ರ ನಂತರವೂ ಲಾಕ್‌ಡೌನ್ ವಿಸ್ತರಿಸಬೇಕು. ಹಾಗೆಯೇ, ಅನ್‌ಲಾಕ್‌ನ್ನು ಹಂತ ಹಂತವಾಗಿ ಮಾಡುವುದು ಸೂಕ್ತ ಎಂದು ತಜ್ಞರು ಹೇಳಿದ್ದಾರೆ.
ಕೇಂದ್ರದ ಗೃಹ ಸಚಿವಾಲಯದ ಆದೇಶ, ಸಚಿವರುಗಳ ಅಭಿಪ್ರಾಯ, ತಜ್ಞರ ಸಲಹೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವರು.
ಲಾಕ್‌ಡೌನ್ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ, ಜೂ. ೫ ರಂದು ಸಚಿವರು, ತಜ್ಞರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಒಂದು ಸ್ಪಷ್ಟ ತೀರ್ಮಾನವಾಗಲಿದೆ.

ರಾಜ್ಯದಲ್ಲಿ ಜೂ. ೭ರವರೆಗೂ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಜೂ. ೩೦ರವರೆಗೆ ಕಠಿಣ ನಿರ್ಬಂಧ ಮತ್ತು ಕಂಟೈನ್ಮೆಂಟ್ ನಿಯಮಾವಳಿಗಳನ್ನು ಮುಂದುವರೆಸುವಂತೆ ಸೂಚನೆ ನೀಡಿದೆ. ಇದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವರು ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರಾಜ್ಯದಲ್ಲಿ ಸದ್ಯ ಜೂ. ೭ರವರೆಗೂ ಲಾಕ್‌ಡೌನ್ ಜಾರಿಯಲ್ಲಿದೆ. ಈ ಲಾಕ್‌ಡೌನ್‌ನ್ನು ಪೂರ್ಣಗೊಳಿಸಲಾಗುವುದು. ಈಗಿನ ಲಾಕ್‌ಡೌನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರದ ಗೃಹ ಸಚಿವಾಲಯ ಕೊರೊನಾ ನಿಗ್ರಹ ಸಂಬಂಧ ಕಠಿಣ ನಿರ್ಬಂಧಗಳನ್ನು ಜೂ. ೩೦ರವರೆಗೂ ಮುಂದುವರೆಸುವಂತೆ ಸೂಚಿಸಿರುವ ಆದೇಶ ರಾಜ್ಯಕ್ಕೆ ಬಂದಿದೆ. ಹಾಗಾಗಿ, ಇದರ ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳು ಶೀಘ್ರವೇ ಎಲ್ಲ ಸಚಿವರುಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡುವರು ಎಂದು ಅವರು ಹೇಳಿದರು.