ಜೂನ್ ೮ ಅತ್ಯುತ್ತಮ ಸ್ನೇಹಿತರ ದಿನ

ಗೆಳೆಯನಿಲ್ಲದ ಬದುಕು ಚಂದ್ರನಿಲ್ಲದ ಆಕಾಶದಂತೆ ಎಂಬ ಮಾತಿದೆ. ಅದು ನೂರಕ್ಕೆ ನೂರರಷ್ಟು ನಿಜ. ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ಗೆಳೆಯ ಬೇಕು.
ನಮ್ಮ ಜೀವನದ ಪ್ರತಿಯೊಂದು ಬದಲಾವಣೆಗೂ ಸಾಕ್ಷಿಯಾಗಬಲ್ಲ ಏಕೈಕ ವ್ಯಕ್ತಿ ನಮ್ಮ ಉತ್ತಮ ಗೆಳತಿ ಅಥವಾ ಗೆಳೆಯ .ನಮ್ಮ ಕುಟುಂಬದ ಸದಸ್ಯರಿಗೂ ಗೊತ್ತಿಲ್ಲದ ನಮ್ಮ ಅನೇಕ ರಹಸ್ಯಗಳಿಗೆ ಸ್ನೇಹಿತರೇ ಸುರಕ್ಷಿತ ಬಾಗಿಲು. ಸಂತೋಷ, ದುಃಖ, ನೋವಿನ ಮೂಲಕ ಸಾಗುವ ನಮ್ಮ ಜೀವನದಲ್ಲಿ ನಮ್ಮ ಬೆನ್ನೆಲುಬಾಗಿ ನಿಲ್ಲುವವರು ನಮ್ಮ ಆತ್ಮೀಯ ಸ್ನೇಹಿತರು. ನಮ್ಮ ಜೀವನದ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನಮ್ಮೊಂದಿಗೆ ಇರುವ ನಮ್ಮ ನಿಜವಾದ ಸ್ನೇಹಿತರೊಂದಿಗೆ ಆಚರಿಸಲು ಮತ್ತು ನಮ್ಮ ಸಂತೋಷ ಮತ್ತು ದುಃಖಗಳಲ್ಲಿ ಹಂಚಿಕೊಳ್ಳಲು ಅತ್ಯುತ್ತಮ ದಿನ ಸ್ನೇಹಿತರ ದಿನ.
ಸ್ನೇಹಿತರು ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಕುಟುಂಬವಾಗಿ ಮಾರ್ಪಡುವ ಸ್ನೇಹಿತರನ್ನು ಗೌರವಿಸುವ ಅಂತಹ ಅತ್ಯುತ್ತಮ ಸ್ನೇಹಿತರನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷ ಜೂನ್ ೮ ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಮೊದಲ ಬಾರಿಗೆ ಜೂನ್ ೮, ೧೯೩೫ ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ ೮ ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಕಾಲಾನಂತರದಲ್ಲಿ, ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನ ಅನೇಕ ದೇಶಗಳಲ್ಲಿ ಆಚರಿಸಲಾಯಿತು. ಈ ಆಚರಣೆಯೂ ಯುವಕರಲ್ಲಿ ಹೆಚ್ಚಿನ ಮನ್ನಣೆ ಪಡೆಯಿತು.
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ಎಂದು
ದಿ.ರಾಜು
ಅನಂತಸ್ವಾಮಿಯವರು ಸುಗಮಸಂಗೀತ
ಕಾರ್ಯಕ್ರಮಗಳಲ್ಲಿ ಎದೆತುಂಬಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ , ಕೇಳುಗರು ಒಂದು ಕ್ಷಣ ಭಾವುಕರಾಗಿ ಮತ್ತೆ ,ಮತ್ತೆ ಹಾಡುವಂತೆ ಒತ್ತಾಯಿಸುತ್ತಿದ್ದರು. ಈ ಹಾಡು ಕೇಳಲು ಎಷ್ಟು ಮಧುರವೋ, ಅದರ ಅರ್ಥವೂ ಅಷ್ಟೇ ಅರ್ಥಪೂರ್ಣ. ಹೌದು ಸ್ನೇಹ ಜೇನಿಗಿಂತ ಸಿಹಿ. ಅಷ್ಟೇ ಅಲ್ಲ, ಅದು ಅಮರವೂ ಹೌದು. ಈ ಸ್ನೇಹದ ಮಾಧುರ್ಯವನ್ನು ಅನುಭವಿಸದ ವ್ಯಕ್ತಿ ಜಗತ್ತಿನಲ್ಲಿ ಇದ್ದಾನೆಯೇ?
ಅತ್ಯುತ್ತಮ ಸ್ನೇಹಿತರು ,ಗೆಳೆತನ ಎಂಬುದು ಇತ್ತೀಚಿನ ಬೆಳವಣಿಗೆ ಅಲ್ಲ .ಪೌರಾಣಿಕ ಕಾಲದಿಂದಲೂ ಉತ್ತಮ ಸ್ನೇಹದ ಉದಾಹರಣೆಗಳು ನಮಗೆ ಸಿಗುತ್ತವೆ. ರಾಮಾಯಣದಲ್ಲಿ ಶ್ರೀರಾಮ ಹನುಮಂತನ ಸ್ನೇಹ, ಮಹಾಭಾರತದಲ್ಲಿ ಕೃಷ್ಣ ಅರ್ಜುನ, ಕೃಷ್ಣ ಸುಧಾಮರ ಗೆಳೆತನವನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ? ಕೃಷ್ಣ ಅರ್ಜುನನಿಗೆ ಉತ್ತಮ ಸ್ನೇಹಿತನಾಗಿದ್ದು ಮಾತ್ರವಲ್ಲ, ಸ್ನೇಹದಲ್ಲಿ ಮಮಕಾರ, ವಾತ್ಸಲ್ಯ, ಸಹೋದರತ್ವ, ರಕ್ಷಣೆ, ಮಾರ್ಗದರ್ಶನ, ಅನ್ಯೋನ್ಯತೆ, ಕ್ರೋಧ ಮುಂತಾದ ಸಂಗತಿಗಳು ಅಡಗಿವೆ ಎಂದು ತಿಳಿ ಹೇಳಿದನು. ಇದೇ ಮಹಾಭಾರತದಲ್ಲಿ ದುರ್ಯೋಧನ ಕರ್ಣನ ಸ್ನೇಹದ ಬಗ್ಗೆ ಎರಡು ಮಾತಿಲ್ಲ .
ಸ್ನೇಹ ಎನ್ನುವುದು ಹೇಳಲಾಗದ ಸುಮಧುರ ಸಂಬಂಧ, ಬಾಲ್ಯದ ಜಗಳ, ತುಂಟಾಟ ಮತ್ತು ಸ್ನೇಹಿತರೊಂದಿಗೆ ಗುದ್ದಾಟ, ಬೆಳೆದ ಮೇಲೆ ಕಾಲೇಜಿನಲ್ಲಿ ಸ್ನೇಹಿತರೊಂದಿಗೆ ಮೋಜು, ಈ ಹಂತದಲ್ಲಿ ಕೆಲವೊಮ್ಮೆ ಪ್ರೀತಿಯಾಗಿ ಬದಲಾಗುವ ಸ್ನೇಹ, ನಿವೃತ್ತಿಯ ನಂತರವೂ,ಹಳೆಯ ಸ್ನೇಹಿತರನ್ನು ಭೇಟಿಯಗುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸವಿಸವಿ ನೆನಪು ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಈ ಸ್ನೇಹ .
ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಸ್ನೇಹಿತರು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಕೆಲವು ಸ್ನೇಹಿತರು ಕೊನೆಯವರೆಗೂ ನಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ. ಹಲವಾರು ಕಾರಣಗಳಿಗಾಗಿ ಕೆಲವು ಸ್ನೇಹಿತರು ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ.
ಸ್ನೇಹ ನಮ್ಮ ಸಮಾನ ವಯಸ್ಕರೊಡನೆ ಆಗಬೇಕೆಂದೇನೂ ಇಲ್ಲ ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ ಸ್ನೇಹದ ಸೆಳೆತವೇ ಅಂತಹುದು. ವಯಸ್ಸಿನ ಮೇರೆಯನ್ನು ಮೀರಿದ್ದು ಎಂಥಹವರನ್ನು ಸ್ನೇಹ ತನ್ನ ಪಾಶದಲ್ಲಿ ಬಂಧಿಸಿಬಿಡುತ್ತದೆ. ಇಡೀ ಪ್ರಪಂಚವೇ ನಮ್ಮನ್ನು ದೂರ ಮಾಡಿದ್ದರೂ ಕಷ್ಟದಲ್ಲಿದ್ದಾಗ ನಮ್ಮ ಜೊತೆಗಿದ್ದು ಜೀವನಕ್ಕೆ ಅರ್ಥ ತುಂಬಿದ ಸ್ನೇಹಿತರನ್ನು ಅನೇಕರು ನೋಡಿರಬಹುದು.
ನಮ್ಮ ಕಷ್ಟವನ್ನು ಹೇಳಿಕೊಳ್ಳುವ ಮುಂಚೆಯೇ ನಮ್ಮ ಹಾವಭಾವ ನಮ್ಮ ಮುಖಚರ್ಯೆಯಿಂದಲೇ ನಮ್ಮ ಮನಸ್ಸಿನ ದುಗುಡವನ್ನು ಅರ್ಥಮಾಡಿಕೊಳ್ಳಬಲ್ಲ ಸ್ನೇಹಿತರಿದ್ದಾರೆ ಇಂಥಹ ಹೃದಯಗಳನ್ನು ಬಂಧಿಸುವ ಬೆಸೆಯುವ ಸಂಬಂಧವನ್ನೆ ಸ್ನೇಹ ಎನ್ನಬಹುದು.
ಈ ರೀತಿಯ ಸ್ನೇಹವನ್ನು ಪ್ರೀತಿಯಿಂದ ಬೆಳೆಸಬೇಕು. ಸಂಪತ್ತನ್ನು ಮೀರಿದ ಸ್ನೇಹಕ್ಕೆ ಬೇಕಾಗಿರುವುದು ಶುದ್ಧ ಪ್ರೀತಿ. ಇದು ಸ್ನೇಹದ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸ್ನೇಹ ಎಂದರೆ ಗೆಳೆಯರ ನಡುವೆ ಬೇಷರತ್ತಾದ ಪ್ರೀತಿ.