ಜೂನ್ ೩ ವಿಶ್ವ ಸೈಕಲ್ ದಿನಾಚರಣೆ

ಜನಸಾಮಾನ್ಯರಿಗೆ ಸೈಕಲ್ ಇಂದಿಗೂ ಸಾರಿಗೆಯ ಸಾಧನವಾದರೆ, ಶ್ರೀಮಂತರಿಗೆ ವ್ಯಾಯಾಮದ ಸಾಧನವಾದರೆ, ಸೈಕ್ಲಿಂಗ್ ಪ್ರಿಯರಿಗೆ ಕ್ರೀಡೆಯ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್ ತುಳಿಯಲು ಹಿಂದೇಟು ಹಾಕುವ ಜನರು ಮನೆಯ ಮೂಲೆಯಲ್ಲಿ ಕುಳಿತು ಸೈಕಲ್ ಪೆಡಲ್ ಮಾಡಬಹುದಾದ ಅತ್ಯಾಧುನಿಕ ವ್ಯಾಯಾಮ ಉಪಕರಣಗಳನ್ನು ತಂದಿದ್ದಾರೆ.
ಸೂರ್ಯೋದಯಕ್ಕೂ ಮೊದಲೇ, ಮಂಜಿನ ನಡುವೆ ಓಡಾಡುತ್ತಾ, ಮನೆಯ ವಿಶಾಲ ಅಂಗಳದಲ್ಲಿ, ಪಟ್ಟಣದ ಆಟದ ಮೈದಾನದಲ್ಲಿ, ಉದ್ಯಾನದ ಫುಟ್ ಪಾತ್ ನಲ್ಲಿ ಸೈಕಲ್ ಸವಾರಿ ಮಾಡುವುದು ದೇಹ ಮತ್ತು ಮನಸ್ಸಿಗೆ ಒಂದು ಅದ್ಭುತ ಅನುಭವ. ದೇಹವನ್ನು ದಂಡಿಸಲು ವ್ಯಾಯಾಮ ಮಾಡಲು ಸೈಕಲ್ ಸವಾರಿಗಿಂತ ಉತ್ತಮ ಮಾರ್ಗವಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ದಿನನಿತ್ಯದ ಸೈಕ್ಲಿಂಗ್ ನಮ್ಮನ್ನು ಅನೇಕ ಮಾರಕ ರೋಗಗಳಿಂದ ದೂರವಿರಿಸುತ್ತದೆ ಮತ್ತು ನಮ್ಮನ್ನು ದೈಹಿಕವಾಗಿ ಸದೃಢವಾಗಿರಿಸುತ್ತದೆ.

೧೮ ನೇ ಶತಮಾನದಲ್ಲಿ, ೧೮೧೬ ರಲ್ಲಿ ಪ್ಯಾರಿಸ್‌ನಲ್ಲಿ ಕುಶಲಕರ್ಮಿ ಬ್ಯಾರನ್ ಕಾರ್ಲ್ ವಾನ್ ಡ್ರೈಸ್ ಈ ಸೈಕಲ್ ಅನ್ನು ಜಗತ್ತಿನ ಜನರಿಗೆ ಪರಿಚಯಿಸಿದ ಉಲ್ಲೇಖವಿದೆ. ೧೮೬೫ ರಲ್ಲಿ ಪಾದದ ಪೆಡಲ್ ಚಕ್ರವನ್ನು ಕಂಡುಹಿಡಿಯಲಾಯಿತು. ಕ್ರಮೇಣ ಸೈಕಲ್ ರಚಿಸಲಾಗಿದೆ, ನಂತರ ಇದು ಪೂರ್ಣ ಪ್ರಮಾಣದ ಸೈಕಲ್
ಅಭಿವೃದ್ಧಿಪಡಿಸಲಾಗಿದೆ.
ಅಂದಿನಿಂದ, ಈ ಚಕ್ರವನ್ನು ಪ್ರಪಂಚದಾದ್ಯಂತ ಸಾರಿಗೆ ಸಾಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಕಾಲಕ್ಕೆ ತಕ್ಕಂತೆ ಸೈಕಲ್ ಕೂಡ ಸುಧಾರಿಸಿತು. ಜೊತೆಗೆ, ಸೈಕ್ಲಿಂಗ್ ಒಂದು ಕ್ರೀಡೆ, ದೈಹಿಕ ವ್ಯಾಯಾಮದ ಸಾಧನವಾಗಿ ಪರಿಗಣಿಸಲಾಗಿತ್ತು. ೨೦೧೮ರಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನವು ಪ್ರತಿ ವರ್ಷ ಜೂನ್ ೩ರಂದು “ವಿಶ್ವ ಬೈಸಿಕಲ್ ದಿನ” ಎಂದು ಆಚರಿಸಲು ನಿರ್ಧರಿಸಿತ್ತು. ಎಲ್ಲರ ಸ್ನೇಹಿ ಸೈಕಲ್ ಇನ್ನೂರು ವರ್ಷ ಹಳೆಯದಾದರೂ, ವಿಶ್ವ ಸೈಕಲ್ ದಿನಕ್ಕೆ ಇನ್ನೂ ಆರು ವರ್ಷ! ಮನುಷ್ಯನ ದಿನನಿತ್ಯದ ಬದುಕಿನ ಭಾಗವಾಗಿರುವ ಸೈಕಲ್ ಎಲ್ಲ ಆಧುನಿಕ ವಾಹನಗಳಿಗಿಂತ ಭಿನ್ನವಾಗಿದ್ದರೂ ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿವೆ.
೨೦೨೩ರಲ್ಲಿ ವಿಶ್ವ ಬೈಸಿಕಲ್ ದಿನ ಆಚರಿಸುವ ಮೂಲಕ ಆರೋಗ್ಯ, ರೋಗ ತಡೆಗಟ್ಟುವಿಕೆ ಮತ್ತು ಕೈಗೆಟಕುವ ದರದ ಸಾರಿಗೆ ಸಾಧನವಾಗಿ ಬೈಸಿಕಲ್ ಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಕಡಿಮೆ ಖರ್ಚಿನಲ್ಲಿ ಸೈಕ್ಲಿಂಗ್ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು. ಸೈಕ್ಲಿಂಗ್ ಮೂಲಕ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಗುತ್ತಿದೆ.
ಸೈಕ್ಲಿಂಗ್‌ನ ದೈಹಿಕ ಪ್ರಯೋಜನಗಳು:
ಸೈಕ್ಲಿಂಗ್ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೆಚ್ಚುವರಿ ತೂಕ ಇಳಿಸುತ್ತದೆ.
ಲೈಂಗಿಕ ಆರೋಗ್ಯ ಉತ್ತಮಗೊಳಿಸುತ್ತದೆ.
ಸೈಕ್ಲಿಂಗ್ ಕರುಳಿನ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ದಿನಕ್ಕೆ ೩೦ ನಿಮಿಷಗಳಿಗಿಂತ ಹೆಚ್ಚು ಕಾಲ ಸೈಕ್ಲಿಂಗ್ ಮಾಡುವುದರಿಂದ ಮಧುಮೇಹದ ಅಪಾಯವನ್ನು ೪೦ ಪ್ರತಿಶತದಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಸೈಕ್ಲಿಂಗ್ ಶಕ್ತಿ, ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸುತ್ತದೆ. ಇದು ಸುಕ್ಕುಗಳು ಮತ್ತು ಮುರಿತಗಳನ್ನು ತಡೆಯಲು ಸಹಾಯ ಮಾಡುತ್ತದೆ
ಸೈಕ್ಲಿಂಗ್ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಉದಾಹರಣೆಗೆ ಖಿನ್ನತೆ, ಒತ್ತಡ ಮತ್ತು ಆತಂಕ. ಆತಂಕ ರಹಿತ ಜೀವನಕ್ಕೆ ಸೈಕ್ಲಿಂಗ್ ಅತ್ಯುತ್ತಮ ಪರಿಹಾರ.
ಹದಿಹರೆಯದ ವಯಸ್ಸಿನಲ್ಲಿ ಇಂಧನ ಬಳಸಿ ಸಾಗುವ ದ್ವಿಚಕ್ರ ವಾಹನಗಳಿಗೂ ಕಡಿಮೆ ಇಲ್ಲವೆಂಬಂತೆ, ಶರವೇಗದಲ್ಲಿ ತುಳಿಯುವ ಸಾಮಾನ್ಯ ಸೈಕಲ್ ಹಾಗೂ ಆಧುನಿಕ ಗೇರ್ ಸೈಕಲ್‌ಗಳು ಮಕ್ಕಳಿಗೆ ವ್ಯಾಯಾಮದೊಂದಿಗೆ ಪ್ರತಿ ಯೊಂದು ಕೆಲಸಕ್ಕೂ ಆಪ್ತಮಿತ್ರನಂತೆ ಜೊತೆಗೂಡುತ್ತದೆ
ಈಗಿನ ಯುಗದಲ್ಲಿ ವಯಸ್ಕರು, ಹಿರಿಯ ನಾಗರಿಕರು ಕೂಡ ದೈಹಿಕ ಆರೋಗ್ಯದ ದೃಷ್ಟಿಯಿಂದ ಬೈಸಿಕಲ್ ನ ಸಾರ್ವಕಾಲಿಕ ಉಪಯುಕ್ತತೆಯನ್ನು ಎತ್ತಿ ತೋರಿಸುತ್ತಾ, ಬೈಸಿಕಲ್ ಅನ್ನು ಬಳಸುತ್ತಿದ್ದಾರೆ. ವಯಸ್ಸಿನ ಹೊರತಾಗಿಯೂ, ಸೈಕಲ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಮತ್ತು ವಾರಾಂತ್ಯದ ದಿನಗಳಲ್ಲಿ ತೊಡಗಿಸಿಕೊಳ್ಳುವ ಸಾಕಷ್ಟು ಬೈಸಿಕಲ್ ಪ್ರೇಮಿಗಳು ಇದ್ದಾರೆ, ಇದು ಸೈಕಲ್ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ವಾಯುಮಾಲಿನ್ಯದಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಸೈಕಲ್ ಬಳಕೆ ಬ್ರಹ್ಮಾಸ್ತ್ರವಿದ್ದಂತೆ.
ಸುಮಾರು ೭೦-೮೦ರ ದಶಕದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ದೂರದ ಶಾಲೆಗಳಿಗೆ ಹೋಗಲು ಮತ್ತು ಸಾಮಾನ್ಯ ಜನರು ದೈನಂದಿನ ಕೆಲಸಗಳಿಗೆ ಹೋಗಲು ಸೈಕಲ್ ಗಳು ಪ್ರಮುಖ ಸಾರಿಗೆ ಸಾಧನಗಳಾಗಿದ್ದವು. ಬೈಸಿಕಲ್ ಗಳು ವೃತ್ತಪತ್ರಿಕೆ ಮತ್ತು ಪೋಸ್ಟ್ಮನ್ಗಳಿಗೆ ವೃತ್ತಿಯ ಅವಿಭಾಜ್ಯ ಅಂಗವಾಗಿತ್ತು. ಶಾಲಾ ಮಕ್ಕಳು ಬೈಕ್ ಏರಿ, ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾ ಸಾಗುತ್ತಿದ್ದ ದಿನಗಳು ವಿದ್ಯಾರ್ಥಿ ಜೀವನದ ಸುವರ್ಣ ದಿನಗಳವು. ಪ್ರಸ್ತುತ ಗ್ರಾಮೀಣ ಪ್ರದೇಶದ ಪ್ರೌಢಶಾಲಾ ಮಕ್ಕಳ ಕಲಿಕೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಗಳನ್ನು ಸಹ ನೀಡುತ್ತಿದೆ. ಈ ಕಾರಣದಿಂದ ಶಾಲೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹತ್ತಿರವಾಗಿದೆ. ಒಟ್ಟಿನಲ್ಲಿ ಎಂದೆಂದಿಗೂ ಸೈಕಲ್ ಎಂಬ ವಿದ್ಯಾರ್ಥಿ ಮಿತ್ರನನ್ನು ಮೀರಿಸಲು ಸಾಧ್ಯವಿಲ್ಲ.