ಜೂನ್ ಮೊದಲ ವಾರದಲ್ಲಿ ರಾಹುಲ್ ಅಮೆರಿಕಕ್ಕೆ

ನವದೆಹಲಿ, ಮೇ.೧೭- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಸಾಧನೆ ಮಾಡಿರುವ ನಡುವೆ ಮುಂದಿನ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕಾ ಭೇಟಿ ನೀಡುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಜೂನ್ ಮೊದಲ ವಾರದಲ್ಲಿ ಅಮೆರಿಕಾಕ್ಕೆ ಭೇಟಿ ನೀಡಲಿದ್ದು, ಜೂನ್ ೪ ರಂದು ನ್ಯೂಯಾರ್ಕ್‌ನಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ)ರನ್ನು ಉದ್ದೇಶಿಸಿ ಅವರು ಮಾತನಾಡುವರು ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಈ ಪ್ರವಾಸದಲ್ಲಿವಾಷಿಂಗ್ಟನ್ ಡಿಸಿ ಮತ್ತು ಲಾಸ್ ಏಂಜಲೀಸ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.ಜತೆಗೆ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ೫ ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸುವರು. ಆ ಬಳಿಕ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ.
ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ವಿವಿಧ ಸಭೆಗಳಲ್ಲಿ ರಾಹುಲ್ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಭೇಟಿ:ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೨೨ ರಂದು ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಶ್ವೇತಭವನದಲ್ಲಿ ಆತಿಥ್ಯ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಒಟ್ಟಿನಲ್ಲಿ ಅವರ ಪ್ರವಾಸಕ್ಕೂ ಮೊದಲು, ರಾಹುಲ್ ಗಾಂಧಿ ಭೇಟಿ ನಿಗದಿಯಾಗಿರುವುದು ಚರ್ಚೆಗೆ ಗ್ರಾಮವಾಗಿದೆ.