ಜೂನ್‌ನಲ್ಲಿ ಅನ್‌ಲಾಕ್ ಜಾರಿಗೆ ಚಿಂತನೆ

ಬೆಂಗಳೂರು,ಮೇ ೧೫- ರಾಜ್ಯದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕು ಜೂನ್‌ನಲ್ಲಿ ಇಳಿಕೆಯಾಗುವ ಎಲ್ಲ ಲಕ್ಷಣಗಳಿದ್ದು, ಜೂನ್ ನಂತರ ಹಂತ ಹಂತವಾಗಿ ಕಠಿಣ ನಿಯಮಗಳನ್ನು ಸಡಿಲಿಸುವ ಸುಳಿವನ್ನು ಸರ್ಕಾರ ನೀಡಿದೆ.
ರಾಜ್ಯದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕನ್ನು ನಿಗ್ರಹಿಸಲು ಜಾರಿಯಾಗಿರುವ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳಿಂದ ಸೋಂಕು ಮುಂದಿನ ದಿನಗಳಲ್ಲಿ ನಿಯಂತ್ರಣಕ್ಕೆ ಬರುಲಿದ್ದು, ಜೂನ್‌ನಲ್ಲಿ ಸೋಂಕು ಇಳಿಕೆಯಾಗಿ ಒಂದು ಹಂತಕ್ಕೆ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಜೂನ್‌ನಂತರ ಈಗಿನ ಕಠಿಣ ನಿಯಮಗಳನ್ನು ಸಡಿಲಿಸುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯನ್ನು ಜೂನ್ ನಂತರ ಕೊರೊನಾ ಕಠಿಣ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಚರ್ಚೆಗಳು ಆಗಿವೆ.
ಸೋಂಕು ನಿಯಂತ್ರಣಕ್ಕೆ ಬಂದ ತಕ್ಷಣವೇ ಅನ್‌ಲಾಕ್ ನಿಯಮಗಳನ್ನು ಜಾರಿ ಮಾಡುವ ಬದಲು ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಸುವುದು ಸೂಕ್ತ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಸೋಂಕು ಕಡಿಮೆಯಾದ ತಕ್ಷಣವೇ ಏಕಾಏಕಿ ನಿರ್ಬಂಧಗಳನ್ನು ಸಡಿಲಿಸುವುದು ಬೇಡ, ಹಠಾತ್ತನೆ ನಿರ್ಬಂಧ ಸಡಿಲಿಸುವುದರಿಂದ ಮುಂದೆ ಅಪಾಯಗಳು ಎದುರಾಗಬಹುದು. ಹಾಗಾಗಿ, ಹಂತ ಹಂತವಾಗಿ ಅನ್‌ಲಾಕ್ ಮಾಡುವುದು ಒಳಿತು ಎಂದು ತಜ್ಞರು ಹೇಳಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಬಂದ ಮೊದಲಿಗೆ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲಿ ಅವಕಾಶ ನೀಡಬೇಕು. ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಪಬ್, ಬಾರ್, ಸಿನಿಮಾ ಮಂದಿರ ಮತ್ತು ಶಾಪಿಂಗ್‌ಮಾಲ್‌ಗಳನ್ನು ತೆರೆಯುವ ಬಗ್ಗೆ ತೀರ್ಮಾನಗಳನ್ನು ಮಾಡುವುದು ಒಳಿತು ಎಂಬ ಸಲಹೆಗಳು ತಜ್ಞರಿಂದ ಬಂದಿದೆ.
ತಜ್ಞರು ಹಂತ ಹಂತವಾಗಿ ಅನ್‌ಲಾಕ್‌ನ್ನು ಪ್ರತಿಪಾದಿಸಿದ್ದಾರೆ. ಇಲ್ಲದಿದ್ದರೆ ೩ನೇ ಅಲೆ ಮತ್ತಷ್ಟು ಮಾರಕವಾಗಬಹುದು ಎಂಬ ಎಚ್ಚರಿಕೆಯನ್ನೂ ತಜ್ಞರು ನೀಡಿದ್ದಾರೆ. ಸಂಭವನೀಯ ಕೊರೊನಾ ೩ನೇ ಅಲೆಯನ್ನು ತಡೆಯಲು ಸರ್ಕಾರ ಈಗಾಗಲೇ ಖ್ಯಾತ ವೈದ್ಯ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿದೆ. ೩ನೇ ಅಲೆಯಿಂದ ಹೆಚ್ಚು ತೊಂದರೆಯಾಗದಂತೆ ಸರ್ಕಾರ ಈಗಿನಿಂದಲೇ ಕ್ರಮ ವಹಿಸುವತ್ತ ಗಮನ ನೀಡಿದೆ.