ಜೂನಿಯರ್ ಕಾಲೇಜು ಮೈದಾನದ ವೇದಿಕೆ ಅಭಿವೃದ್ದಿ: ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚನೆ

ತುಮಕೂರು, ಡಿ. ೧೯- ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ವೇದಿಕೆಯನ್ನು ಅಭಿವೃದ್ದಿಪಡಿಸಲು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸ್ಥಳ ಪರಿಶೀಲನೆ ನಡೆಸಿದರು.
ಪರಿವೀಕ್ಷಣೆ ಸಮಯದಲ್ಲಿ ಕ್ರೀಡಾ ತರಬೇತಿದಾರರು ನುರಿತ ಕ್ರೀಡಾಪಟುಗಳು ಹಾಗೂ ಹಿರಿಯ ನಾಗರಿಕರೊಂದಿಗೆ ಸ್ಟೇಜ್ ಅಭಿವೃದ್ಧಿಪಡಿಸುವ ವಿಚಾರವನ್ನು ಚರ್ಚಿಸಿದರು.
ಕಾಲೇಜು ಮೈದಾನವು ವಿಶಾಲವಾಗಿದ್ದು, ೧೦ ಎಕರೆಯಲ್ಲಿ ತೆರೆದ ಮೈದಾನವಿದೆ. ಈ ಮೈದಾನವು ಹಲವು ಕ್ರೀಡಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಇರುವ ವೇದಿಕೆ ಅಥವಾ ಸ್ಟೇಜ್ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರೀನ್ ರೂಮ್‌ಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸಿ ಮುಂದಿನ ೨೦ ವರ್ಷಗಳಿಗೆ ಹೊಂದಿಕೊಳ್ಳುವಂತೆ ಎಲ್ಲಾ ಸುವ್ಯವಸ್ಥೆ ಸುಸಜ್ಜಿತವಾಗಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಗ್ರೀನ್ ರೂಮ್ ಮತ್ತು ಅತಿಥಿಗಳಿಗಾಗಿ ಗ್ರೀನ್ ರೂಮ್ ನಿರ್ಮಾಣ ಮೊದಲನೇ ಮಹಡಿಯಲ್ಲಿ ಮಿನಿ ಸಭಾಂಗಣವನ್ನು ನಿರ್ಮಿಸಿ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯಗಳನ್ನು ನಿರ್ಮಿಸಲು ಸೂಕ್ತ ವಿನ್ಯಾಸಗಳೊಂದಿಗೆ ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಆರ್ಕಿಟೆಕ್ಟ್, ಯೋಜನೆ ಸಲಹೆಗಾರರಿಗೆ ವಿನ್ಯಾಸ ನೀಡಲು ತಿಳಿಸಿದರು.
ಅಗತ್ಯವಿರುವ ಅನುದಾನವನ್ನು ಒದಗಿಸುವುದಕ್ಕೆ ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಿನ್ಯಾಸಗಳನ್ನು ಅಂತಿಮಗೊಳಿಸಲು ಎಲ್ಲಾ ಬಳಕೆದಾರರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ನೀಡಲು ಸೂಚಿಸಿದರು.
ಸ್ಟೇಜ್ ವಿನ್ಯಾಸವನ್ನು ಅಗತ್ಯಕ್ಕೆ ತಕ್ಕಂತೆ ವಿಶಾಲಗೊಳಿಸಬೇಕು. ಮೈದಾನದಲ್ಲಿ ತೆರೆದ ಸ್ಟೇಜ್ ಇದ್ದು, ಪ್ರತಿ ಬಾರಿ ಕಾರ್ಯಕ್ರಮಕ್ಕೆ ಸ್ಟೇಜ್ ಪೆಂಡಾಲ್ ನಿರ್ಮಿಸಬೇಕಾಗುತ್ತದೆ. ಕಾರ್ಯಕ್ರಮ ಆಯೋಜಕರಿಗೆ ಪ್ರಯೋಜನವನ್ನು ಅರಿತು ಪ್ರಸ್ತುತವಿರುವ ಹೆರಿಟೇಜ್ ಕಟ್ಟಡದ ಮಾದರಿಯಲ್ಲಿ ಮೇಲ್ಚಾವಣಿಯನ್ನು ವಿನ್ಯಾಸಗೊಳಿಸುವಂತೆ ತಿಳಿಸಿದರು.
ಮೈದಾನ ತುಂಬಾ ವಿಶಾಲವಾಗಿದ್ದು, ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಕ್ಕೆ ನೆರವಾಗುವಂತೆ ಅಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಎಲ್ಲಾ ಕಾಮಗಾರಿಗಳು ಕೈಗೊಳ್ಳಲು ಹಾಗೂ ಆಟದ ಮೈದಾನದ ಮರು ವಿನ್ಯಾಸಕ್ಕಾಗಿ ಅಗತ್ಯ ಇರುವ ಅನುದಾನ ಪಡೆಯುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ನಾಗಣ್ಣ, ಸ್ಮಾರ್ಟ್‌ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಟಿ. ರಂಗಸ್ವಾಮಿ, ಕಾರ್ಯಪಾಲಕ ಅಭಿಯಂತರ ಕೆ. ಬಸವರಾಜೇಗೌಡ, ಯೋಜನ ಸಲಹಗಾರರಾದ ಪವನ್ ಸೈನಿ, ಆರ್ಕಿಟೆಕ್ಟ್ ಜಾವಿದ್, ಕ್ರೀಡಾ ಪಟುಗಳಾದ ಸುನಿಲ್, ರವಿಕುಮಾರ್, ಪ್ರದೀಪ್, ಗುರು ಮತ್ತಿತರರು ಉಪಸ್ಥಿತರಿದ್ದರು.