ಜೂಟಮರಡಿ ಗ್ರಾ.ಪಂ. ಚುನಾವಣೆ : ಲಘು ಲಾಠಿ ಪ್ರಹಾರ

ಪಿಎಸ್‌ಐ ಸೇರಿ ಐವರ ಪೇದೆ ಬೆನ್ನಟ್ಟಿ ಗ್ರಾಮಸ್ಥರ ಹಲ್ಲೆ
ದೇವದುರ್ಗ.ಡಿ.೨೨- ಗ್ರಾಮದ ಆಡಳಿತರೂಢ ಪ್ರಭಾವಿ ಯುವಕನೋರ್ವ ಮತಗಟ್ಟೆ ಪ್ರವೇಶ ತಡೆ ಪ್ರಕರಣಕ್ಕೆ ಸಂಬಂಧಿಸಿ ಆಕ್ರೋಶಗೊಂಡ ಜನ ಪಿಎಸ್‌ಐ ಸೇರಿದಂತೆ ೫ ಜನ ಪೊಲೀಸರನ್ನು ಗ್ರಾಮದಲ್ಲಿ ಬೆನ್ನಟ್ಟಿ ವಾಹನಕ್ಕೆ ಕಲ್ಲುತೂರಿ ಓಡಿಸಿದ ಲಘು ಲಾಠಿ ಪ್ರಕರಣ ತಾಲೂಕಿನ ಜೂಟಮರಡಿ ಗ್ರಾಮದಲ್ಲಿ ಇಂದು ನಡೆಯಿತು.
ಮುಂಜಾನೆ ೭ ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಆದರೆ, ಕೆಲ ಸಮಯದ ನಂತರ ಶಾಸಕ ಕೆ.ಶಿವನಗೌಡ ನಾಯಕ ಕಟ್ಟಾ ಬೆಂಬಲಿಗ ಮತ್ತು ಅವರ ಸಂಬಂಧಿತನ ಯುವಕನೊಬ್ಬ ಮತಗಟ್ಟೆ ಪ್ರವೇಶಕ್ಕೆ ಪೊಲೀಸರು ತಡೆದಿರುವುದೇ ಈ ಘಟನೆಗೆ ಕಾರಣವಾಯಿತೆಂದು ಹೇಳಲಾಗಿದೆ. ಅಲ್ಲಿಯೇ ಇದ್ದ ಪಿಎಸ್‌ಐ ಮತ್ತು ಯುವಕನ ಮಧ್ಯೆ ಮಾತಿನ ಚಕಮಕಿ ನಡೆಯಿತು.
ರಾಯಚೂರು ಪಶ್ಚಿಮ ಠಾಣೆಯ ಪೊಲೀಸರೊಬ್ಬರು ಇದನ್ನು ಬಿಡಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಅಲ್ಲಿಯೇ ಇದ್ದ ಜನರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು, ನೋಡು ನೋಡುತ್ತಿದ್ದಂತೆ ಗ್ರಾಮಸ್ಥರು, ಪಿಎಸ್‌ಐ ಸೇರಿದಂತೆ ಐವರು ಪೇದೆಗಳ ಮೇಲೆ ಹಲ್ಲೆಗೆ ಮುಂದಾದರು. ಇದರಿಂದ ಭಯಭೀತಗೊಂಡ ೫ ಜನ ಪೊಲೀಸರು ಓಡಲು ಆರಂಭಿಸಿದರು. ಗ್ರಾಮಸ್ಥರು ಅಲ್ಲಿಗೆ ನಿಲ್ಲದೇ, ಪೊಲೀಸರ ಬೆನ್ನಟ್ಟಿ ಹಲ್ಲೆಗೆ ಮುಂದಾದರು. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣವಾಯಿತು. ೫ ಜನ ಪೊಲೀಸರು ವಾಹನ ಹತ್ತಿ ಅಲ್ಲಿಂದ ಪರಾರಿಯಾದರು ಎಂದು ಗ್ರಾಮಕ್ಕೆ ಭೇಟಿ ನೀಡಿದ ಮಾಧ್ಯಮಗಳಿಗೆ ಅಲ್ಲಿಯ ನಿವಾಸಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರವೂ ನಡೆದಿದೆಂದು ಹೇಳಲಾಗಿದೆ. ನಂತರ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯುಕ್ತಿಗೊಳಿಸಲಾಯಿತು. ಆದರೆ, ಪೊಲೀಸರನ್ನು ಈ ವಿಷಯಕ್ಕೆ ಸಂಬಂಧಿಸಿ ಮಾಹಿತಿ ಕೇಳಿದರೇ, ಗ್ರಾಮದಲ್ಲಿ ಯಾವುದೇ ಸಮಸ್ಯೆಯಾಗಿಲ್ಲವೆಂದು ಮಾಹಿತಿ ನೀಡಿದರು. ಕೆಲ ಸಮಯ ಮತದಾನ ಮಂದಗತಿಯಲ್ಲಿ ನಡೆಯಿತಾದರೂ ಮತ್ತೇ ಪರಿಸ್ಥಿತಿ ಶಾಂತ ರೀತಿಗೆ ಮರಳಿದ ನಂತರ ಮತ್ತೇ ಮತದಾನ ಬಿರುಸಿನಿಂದ ಆರಂಭಗೊಂಡಿತು. ಮಾಸ್ಕ್ ಕಡ್ಡಾಯವೆಂದು ಏನೆಲ್ಲಾ ಜಾಗೃತಿ ಮೂಡಿಸಿದರೂ, ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಆರಂಭದಲ್ಲಿ ಮಾಸ್ಕ್ ಧಾರಣೆ ಕಾಲಾಂತರದಲ್ಲಿ ಮರೆಯಾಗಿ, ಸಾಮಾಜಿಕ ಅಂತರ ಮರೆತು ಹೋಗಿ ಮತಗಟ್ಟೆಗಳ ಮುಂದೆ ಜನ ಗುಂಪು ಗುಂಪಾಗಿ ಸೇರಿರುವುದು ಕಂಡು ಬಂದಿತು.