ಜೂಜು ಘೋರ ಅಪರಾಧ ಕಾನೂನು ಜಾರಿ : ಸಿ.ಎಂ.

ಬೆಂಗಳೂರು, ಸೆ. ೨೧- ರಾಜ್ಯದಲ್ಲಿ ಜೂಜಾಟಗಳನ್ನು ತಡೆಯಲು ಕಾನೂನನ್ನು ಬಿಗಿಗೊಳಿಸುವ ಕೆಲಸ ನಡೆದಿದೆ. ಜೂಜಾಟದಲ್ಲಿ ತೊಡಗಿರುವವರಿಗೆ ಶಿಕ್ಷೆ ನೀಡುವ ಕಾನೂನು ತಿದ್ದುಪಡಿ ಮುಖಾಂತರ ಜೂಜಾಟ ತಡೆಗೆ ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಹಲವು ಸದಸ್ಯರು ಜೂಜಾಟ ತಡೆಯವ ಬಗ್ಗೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವರು ಉತ್ತರ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಜೂಜಾಟ ಈಗ ಘೋರ ಅಪರಾಧ ಎಂದು ಪರಿಗಣಿಸುತ್ತಿಲ್ಲ. ಇದನ್ನು ಘೋರ ಅಪರಾಧ ಎಂದು ಪರಿಗಣಿಸಿ ಜೂಜಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಈಗಿರುವ ಕಾನೂನಿನಂತೆ ಜೂಜಾಡುವರನ್ನು ಬಂಧಿಸಿದ ನಂತರ ಒಂದೆರಡು ದಿನಗಳಲ್ಲಿ ಅವರು ದಂಡ ಕಟ್ಟಿ ಹೊರ ಬರುತ್ತಾರೆ. ಹಾಗಾಗಿ ಜೂಜಾಟವನ್ನು ತಡೆಯಲು, ಜೂಜಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿ ಮಾಡಲಾಗುತ್ತಿದೆ. ಇದರಿಂದ ಜೂಜಾಟವನ್ನು ತಡೆಯಬಹುದಾಗಿದೆ ಎಂದು ಅವರು ಹೇಳಿದರು.
ಇದೇ ಅಧಿವೇಶನದಲ್ಲಿ ಈಗಾಗಲೇ ಜೂಜಾಟ ತಡೆಯವ ಕಾಯ್ದೆಯನ್ನು ಮಂಡಿಸಲಾಗಿದೆ ಎಂದು ಅವರು ತಿಳಿಸಿದರು.