ಜು1 ರಿಂದ ಕೈವಾರ ಗುರುಪೂಜಾ-ಸಂಗೀತೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ

ಕೋಲಾರ,ಜೂ,೫-ಚಿಂತಾಮಣಿ ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ಮಠದಲ್ಲಿ ಜುಲೈ ೧ ರಿಂದ ೩ ರವರೆಗೆ ನಡೆಯುವ ರಾಷ್ಟ್ರಮಟ್ಟದ ಸಂಗೀತೋತ್ಸವ ಮತ್ತು ಗುರುಪೂಜಾ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಸನ್ನಿಧಿಯಲ್ಲಿ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ವಿಶೇಷ ಪೂಜೆಯನ್ನು ಸಮರ್ಪಿಸುವುದರ ಮೂಲಕ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಾ||ಎಂ.ಆರ್.ಜಯರಾಮ್ ರವರು ಮಾತನಾಡುತ್ತಾ ಗುರುಗಳ ಪೂಜೆ ಮತ್ತು ಸಂಗೀತೋತ್ಸವವನ್ನು ಗುರುಪೂರ್ಣಿಮೆಯ ವಿಶೇಷವಾಗಿ ೩ ದಿನಗಳು ನಿರಂತರ ೭೨ ಗಂಟೆಗಳ ಕಾಲ ಶ್ರೀಕ್ಷೇತ್ರದಲ್ಲಿ ನಡೆಯುತ್ತದೆ. ಸಂಗೀತ ವಿದ್ವಾಂಸರುಗಳು ಸಂಕೀರ್ತನೆಯನ್ನು ಶ್ರದ್ದಾಭಕ್ತಿಗಳಿಂದ ಗುರುಗಳಿಗೆ ಸಮರ್ಪಿಸಲಿದ್ದಾರೆ ಎಂದರು.
ಕೈವಾರದ ಸಂಗೀತೋತ್ಸವವು ಸಂಗೀತಕ್ಷೇತ್ರದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಗುರುಪೂಜಾ – ಸಂಗೀತ ಮಹೋತ್ಸವಗಳು ಸುಮಾರು ವರ್ಷಗಳಿಂದಲೂ ಕೈವಾರದಲ್ಲಿ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ದೇಶದ ವಿವಿಧ ಸಂಗೀತ ವಿದ್ವಾಂಸರುಗಳು ಇಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ. ಸಂಗೀತ ರಸದೌತಣವನ್ನು ಸವಿಯಲು ಸಂಗೀತ ಪ್ರಿಯರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದರು.
ಶ್ರೀ ಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡುತ್ತಾ ಜುಲೈ ೧ ಶನಿವಾರ ಬೆಳಿಗ್ಗೆ ೬ ಗಂಟೆಗೆ ಗುರುಪೂಜೆ-ಸಂಗೀತೋತ್ಸವ ಆರಂಭವಾಗುತ್ತದೆ. ನಾಡಿನ ಪ್ರಸಿದ್ದ ವಿದ್ವಾಂಸರುಗಳು, ನಾದಸ್ವರ ವಾದಕರು, ಸಂಗೀತಗಾರು ಹಾಗೂ ಕಲೆಯ ನಾನಾ ಪ್ರಕಾರದ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕಾಣುವ ಅವಕಾಶ ಒದಗಿಬಂದಿದೆ. ಇಂತಹ ಕಾರ್ಯಕ್ರಮಗಳನ್ನು ಸಂಗೀತ ಕಲಾಭಿಮಾನಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸದ್ಗುರು ಶ್ರೀಯೋಗಿನಾರೇಯಣ ಮಠದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಗುರುಪೂಜಾ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಆಹ್ವಾನಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಮಠದ ಟ್ರಸ್ಟ್‌ನ ಉಪಾಧ್ಯಕ್ಷರಾದ ಜೆ..ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀ ಯೋಗಿ ನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಉಪನ್ಯಾಸಕ ವೆಂಕಟರಮಣಪ್ಪ, ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.