ಜು.9ರಂದು ಪ್ರಥಮ ಹಕ್ಕೊತ್ತಾಯ ಸಭೆ ಕೇಂದ್ರ ಒಬಿಸಿ ಪಟ್ಟಿಗೆ ವೀರಶೈವ-ಲಿಂಗಾಯತ ಸಮುದಾಯ ಸೇರ್ಪಡೆಗೆ ಆಗ್ರಹ

ಕಲಬುರಗಿ,ಜೂ.24-ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಲು ಜುಲೈ 9 ರಂದು ಬೆಳಗ್ಗೆ 10ಕ್ಕೆ ನಗರದ ಶ್ರೀ ಶರಣಬಸವೇಶ್ವರ ಸೆಂಟಿನರಿ ಹಾಲ್‍ನಲ್ಲಿ ಚಿಂತನ ಮಂಥನ ಹಾಗೂ ಪ್ರಥಮ ಹಕ್ಕೊತ್ತಾಯ ಸಭೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಈ ನಿಟ್ಟಿನಲ್ಲಿ ವಿವರ ನೀಡಲು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಾ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಈ ಮಹತ್ವದ ಸಭೆ ನಡೆಯಲಿದೆ ಎಂದರು.
ಇದೇ ಜೂನ್ 1ರಂದು ಬೆಂಗಳೂರಿನಲ್ಲಿ ಪ್ರಥಮ ಚಿಂತನ ಮಂಥನ ಸಭೆ ನಡೆದಿದ್ದು, ಇದಾದ ಬಳಿಕ ಜೂನ್ 15ರಂದು ಹುಬ್ಬಳ್ಳಿಯಲ್ಲಿ ಎರಡನೇ ಸಭೆ ಯಶಸ್ವಿಯಾಗಿ ನಡೆಸಲಾಗಿದೆ. ಹಾಗಾಗಿ, ಜು.9ರಂದು ಕಲಬುರಗಿ ನಗರದಲ್ಲಿ ಇಂಥದ್ದೊಂದು ಮಹತ್ವದ ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಇದೇ ರೀತಿ ರಾಜ್ಯದ 14-15 ಜಿಲ್ಲೆಗಳಲ್ಲಿ ಇಂತಹ ಸಭೆಗಳನ್ನು ನಡೆಸಲಾಗುವುದು. ಈ ಸಭೆಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಳೆದ ವರ್ಷದ ಆಗಸ್ಟ್‍ನಲ್ಲಿ ಸಮುದಾಯವನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಮಹಾಸಭಾ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಕೈಗೊಂಡು ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೂ ಈವರೆಗೆ ಕೇಂದ್ರ ಸರಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯ ಇತರ ಹಿಂದುಳಿದ ವರ್ಗಗಳಲ್ಲಿ ಪರಿಗಣಿಸಲ್ಪಡುತ್ತಿದೆ. ಹೀಗಾಗಿ, ಕೇಂದ್ರ ಸರಕಾರದ ಹಿಂದುಳಿದ ಪಟ್ಟಿಗೆ ಸೇರ್ಪಡೆ ಮಾಡುವುದರಿಂದ ಯಾವುದೇ ತಪ್ಪಾಗುವುದಿಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಈವರೆಗೆ ಸೇರ್ಪಡೆ ಆಗದ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಕೇಂದ್ರ ಸರಕಾರದಿಂದ ಲಭಿಸುವ ಯಾವುದೇ ಸವಲತ್ತು ದೊರೆಯುತ್ತಿಲ್ಲ. ಮೇಲಾಗಿ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯ ಆಯಾ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ, ಕೇಂದ್ರ ಸರಕಾರ ಮಾತ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಇನ್ನೂ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಸಮುದಾಯದ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಶೈಕ್ಷಣಿಕ ಸಂಸ್ಥೆ ಮತ್ತು ಕೇಂದ್ರ ಸರಕಾರದ ನೇಮಕಾತಿಗಳಲ್ಲಿ ಅಗತ್ಯ ಅವಕಾಶ ದೊರೆಯದೆ ವಂಚಿತರಾಗುತ್ತಿದ್ದಾರೆ ಎಂದು ಮೋದಿ ವಸ್ತುಸ್ಥಿತಿ ವಿವರಿಸಿದರು.
ಕಡಗಂಚಿ ಶಾಂತಲಿಂಗೇಶ್ವರ ಸಂಸ್ಥಾನದ ವೀರಭದ್ರ ಶಿವಾಚಾರ್ಯರು, ಶಕಾಪುರ ವಿಶ್ವರಾಧ್ಯ ಸಂಸ್ಥಾನ ಮಠದ ಸಿದ್ಧರಾಮ ಶಿವಾಚಾರ್ಯರು, ಪಾಳಾ ಕಟ್ಟಿಮನಿ ಹಿರೇಮಠ ಸಂಸ್ಥಾನದ ಗುರುಮೂರ್ತಿ ಶಿವಾಚಾರ್ಯರು, ಹಿರೇನಾಗಾಂವ್ ವಿರಕ್ತಮಠದ ಜಯ ಶಾಂತಲಿಂಗ ಮಹಾಸ್ವಾಮೀಜಿ, ಶಾಂತವೀರ ಶಿವಾಚಾರ್ಯರು, ಪಂಪಾಪತಿ ಶಿವಾಚಾರ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಮುಖಂಡರಾದ ಸೋಮಶೇಖರ್ ಹಿರೇಮಠ ಸೇರಿದಂತೆ ಇತರರಿದ್ದರು


ಬಿಡಿ ಬಿಡಿ ಅಲ್ಲ; ಒಕ್ಕೊರಲ ಹೋರಾಟ
ವೀರಶೇವ-ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಈವರೆಗೆ ಸಮುದಾಯದ ಒಳಪಂಗಡಗಳು ಬಿಡಿ ಬಿಡಿಯಾಗಿ ಹೋರಾಟ ನಡೆಸಿದ್ದಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಹೋರಾಟದ ತೀವ್ರತೆಯ ಚುರುಕು ಮುಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಮುದಾಯದ ಎಲ್ಲ ಒಳಪಂಗಡಗಳು ಒಂದಾಗಿ ಒಕ್ಕೊರಲ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಜಿ ಮೇಯರ್ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಹೇಳಿದರು.