ಜು.8ರಂದು ರಾಜ್ಯದಾದ್ಯಂತ ಲೋಕ್ ಅದಾಲತ್ ಅಭಿಯಾನ

ತಿ.ನರಸೀಪುರ: ಜೂ.04:- ಜುಲೈ 8ರಂದು ರಾಜ್ಯದಾದ್ಯಂತ ‘ಲೋಕ್ ಅದಾಲತ್ ‘ಅಭಿಯಾನ ನಡೆಯಲಿದ್ದು,ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ಮಟ್ಟದ ನ್ಯಾಯಾಲಯಗಳ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಚ್.ಹನುಮಂತ ಮಾಹಿತಿ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕ್ ಅದಾಲತ್ ಬಗ್ಗೆ ಚರ್ಚಿಸಲು ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು,ಮುಂದಿನ ತಿಂಗಳು 8ರಂದು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ಲೋಕ್ ಅದಾಲತ್ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.ಸಾರ್ವಜನಿಕರು ನ್ಯಾಯಾಲಯಗಳಿಗೆ ಅಲೆಯುವುದು,ಕಾಲ ವಿಳಂಬ ಮತ್ತು ತುರ್ತು ನ್ಯಾಯದಾನದ ದೃಷ್ಟಿಯಲ್ಲಿ ಲೋಕ್ ಅದಾಲತ್ ಅಭಿಯಾನ ನಡೆಸಲಾಗುತ್ತಿದ್ದು,ಜನರಿಗೆ ವ್ಯಾಜ್ಯಗಳಿಂದ ಮುಕ್ತಿ ನೀಡುವುದು ಲೋಕ್ ಅದಾಲತ್ ನ ಮುಖ್ಯ ಧ್ಯೇಯ ಎಂದರು
ಲೋಕ್ ಅದಾಲತ್ ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಚೆಕ್ ಅಮಾನ್ಯ ಪ್ರಕರಣ,ಆರ್ಥಿಕ ವಸೂಲಾತಿ,ಉದ್ಯೋಗ ಪುನರ್ ಸ್ಥಾಪನೆ,ಕಾರ್ಮಿಕ ಕ್ಲೇಮಿನ ಪ್ರಕರಣ, ವಿಮೆ ಕ್ಲೇಮು ಪ್ರಕರಣ ,ಭೂಸ್ವಾಧೀನ ಪ್ರಕರಣಗಳು,ಕೌಟುಂಬಿಕ ಪ್ರಕರಣ,ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಇನ್ನಿತರೆ ರಾಜಿಸಂಧಾನ ಆಗಬಲ್ಲ ಪ್ರಕರಣಗಳನ್ನು ಉಭಯ ಪಾರ್ಟಿಗಳ ಒಪ್ಪಿಗೆ ಮೇರೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಗುವುದು ಎಂದರು.
ಅದಾಲತ್ ಕುರಿತು ಸಾರಿಗೆ ಇಲಾಖೆ ,ಅರೋಗ್ಯ ಇಲಾಖೆ,ಪಂಚಾಯತ್ ರಾಜ್ಯ ಇಲಾಖೆ ,ಪೌರಾಡಳಿತ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.ಅದಾಲತ್ ನಲ್ಲಿ ನ್ಯಾಯಾಲಯ ಮತ್ತು ಇಲಾಖಾವಾರು ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನ ಮುಖೇನ ಇತ್ಯರ್ಥಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಲಹೆ ನೀಡಿದರು.ಸಾರ್ವಜನಿಕರು ಲೋಕ್ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ತುರ್ತು ಇತ್ಯರ್ಥಪಡಿಸಿಕೊಳ್ಳಲು ಮನವಿ ಮಾಡಿದರು.
ಎಸ್.ಎಸ್.ಎಲ್.ಸಿ ಮಕ್ಕಳಿಗೆ ಜನನ ಪ್ರಮಾಣ ಪತ್ರ:
ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜನನ ಧೃಢೀಕರಣ ಇರುವ ಬಗ್ಗೆ ಖಚಿತಪಡಿಸಿಕೊಂಡು ಜನನ ಮಾಹಿತಿ ಇಲ್ಲದ ಮಕ್ಕಳಿಗೆ ಜನನ ದೃಢೀಕರಣ ನೀಡಲು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು.ಉದ್ಯೋಗ, ಪಾಸ್ ಪೆÇೀರ್ಟ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಜನನ ಪ್ರಮಾಣ ಪತ್ರದ ರುಜುವಾತು ಕಡ್ಡಾಯ ಆಗಿರುತ್ತದೆ.ಹಾಗಾಗಿ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಬಂದಲ್ಲಿ ಎಲ್ಲ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡುವ ಬಗ್ಗೆ ತುರ್ತು ಕ್ರಮವಹಿಸಲಾಗುವುದು ಎಂದರು.
ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಚೇತನ್ ಅನ್ನದಾನಿ ಮಂಜುನಾಥ್,ಅಪರ ನ್ಯಾಯಾಧೀಶರಾದ ಕೆ .ಎನ್.ವೆಂಕಟೇಶ್, ತಹಶೀಲ್ದಾರ್ ಸಿ.ಜಿ.ಗೀತಾ,ತಿ.ನರಸೀಪುರ ಸರ್ಕಲ್ ಇನ್ಸ್ಪೆಕ್ಟರ್ ಬಿ.ಮಹೇಶ ,ಬನ್ನೂರು ಸರ್ಕಲ್ ಇನ್ಸ್ಪೆಕ್ಟರ್ ಲೋಲಾಕ್ಷಿ ,ಪಿಎಸ್‍ಐಗಳಾದ ತಿರುಮಲ್ಲೇಶ್ ,ವಿನೋದ್ ಕುಮಾರ್ ,ತಾಲೂಕು ವೈದ್ಯಾಧಿಕಾರಿ ಡಾ.ಎಂ.ರವಿಕುಮಾರ್
ಸರ್ಕಾರಿ ವಕೀಲರಾದ ಸುಮಿಯಾಬಾನು ,ಅನಿತಾಕುಮಾರಿ ,ಸಹಾಯಕ ಸರ್ಕಾರಿ ವಕೀಲರಾದ ರವಿಶಂಕರ್, ವಲಯ ಅರಣ್ಯಾಧಿಕಾರಿ ರಾಜೇಶ್, ಸಾಮಾಜಿಕ ಅರಣ್ಯಾಧಿಕಾರಿ ಸಯ್ಯದ್ ನದೀಮ್, ವಕೀಲ ಸಂಘದ ಅಧ್ಯಕ್ಷ ಫಾಲಾಕ್ಷಮೂರ್ತಿ, ಅಬಕಾರಿ ಅಧಿಕಾರಿ ರಾಜೇಶ್,ಕಾರ್ಮಿಕ ಅಧಿಕಾರಿ ರಾಜಣ್ಣ ,ವಕೀಲರಾದ ಲಿಂಗಣ್ಣ ,ಬಿಂದುಶ್ರೀ ,ನಾಗಮ್ಮ ,ಸೋಮಣ್ಣ ,ನಿಧಿ ,ನಂಜಪ್ಪ ,ಶಾಂತನಾಗರಾಜ್ ,ತಾ.ಪಂ .ಸುರೇಖಾ, ಎಸ್.ಬಿ.ಐ .ಮಂಜುನಾಥ್ ,ಕರ್ನಾಟಕ ಬ್ಯಾಂಕ್ ಉಮೇಶ್,ಮಾದಪ್ಪ ಹಾಜರಿದ್ದರು.