ಜು. 31 ರವರೆಗೆ ಜಿಲ್ಲೆಯಾದ್ಯಂತ“ಸಂಘಟನೆಯಿಂದ ಸಮೃದ್ಧಿ-ಸಾಮಾಜಿಕ ಕ್ರೂಢೀಕರಣ ಆಂದೋಲನ”

ಕಲಬುರಗಿ.ಮೇ.24:ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ 2023ರ ಜುಲೈ 31 ರವರೆಗೆ ಸಾಮಾಜಿಕ ಕ್ರೂಢೀಕರಣ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅವರು ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಪ್ರತಿ ಕುಟುಂಬದ ಒಬ್ಬ ಮಹಿಳೆ ಸ್ವ-ಸಹಾಯ ಗುಂಪುಗಳಲ್ಲಿ ಸೇರ್ಪಡೆಯಾಗುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸಾಲಿಗೆ ಹೊಸದಾಗಿ 38,660 ಕುಟುಂಬಗಳನ್ನು ಸಂಜೀವಿನಿ-ರಾಷ್ಟ್ರಿಯ ಗ್ರಾಮೀಣ ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ.
ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನುಷ್ಠಾನವಾಗುತ್ತಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಹಿಳಾ ಕಾರ್ಮಿಕರು,(ಎಂಜಿನರೇಗಾ), ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಫಲಾನುಭವಿಗಳು (ಪಿಎಂಎವೈ-ಜಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ದುರ್ಬಲ ವರ್ಗದ ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ತೃತೀಯ ಲಿಂಗದವರು ಸೇರಿದಂತೆ, ಹೊಸ ಸ್ವ-ಸಹಾಯ ಸಂಘ ರಚಿಸಲು ಅವಕಾಶವಿರುತ್ತದೆ.

ಈಗಾಗಲೇ ವಿವಿಧ ಇಲಾಖೆ, ಎನ್‍ಜಿಓ ಗಳ ಮೂಲಕ ರಚಿಸಿದ ಸ್ವ-ಸಹಾಯ ಸಂಘಗಳು ಸೇರ್ಪಡೆಯಾಗಲು ಅವಕಾಶವಿದೆ. ಅದರಂತೆ ಯೋಜನೆಯಡಿ ನೀಡುವ 1.50 ಲಕ್ಷ ರೂ. ಸಮುದಾಯ ಬಂಡವಾಳ ನಿಧಿ, ಸುತ್ತುನಿಧಿ, ವಿಆರ್‍ಎಫ್ ನಿಧಿ ಮತ್ತು ಕೃಷಿ ಹಾಗೂ ಕೃಷಿಯೇತರ ಜೀವನೋಪಾಯ ಚಟುವಟಿಕೆಗಳ ಬಗ್ಗೆ ತರಬೇತಿ, ಮಾರ್ಗದರ್ಶನ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯವನ್ನು ಪಡೆಯುವಲ್ಲಿ ಮೊದಲ ಆದ್ಯತೆ ಮೇಲೆ ಅವಕಾಶ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.