ಜು. 29 ರಿಂದ ಆ. 3 ರವರೆಗೆ ನವದೆಹಲಿಯಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಲೋಕ ಅದಾಲತ್

ಕಲಬುರಗಿ:ಮೇ.31:ನವದೆಹಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ 2024ರ ಜುಲೈ 29 ರಿಂದ ಆಗಸ್ಟ್ 3 ರವರೆಗೆ ವಿಶೇಷ ಲೋಕ್ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿನ ಸರ್ವೋಚ್ಚ ನ್ಯಾಯಾಲಯದ ಕಕ್ಷಿದಾರರು ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಕಲಬುರಗಿಯಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ ಅವರು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಕೆಲವು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅರ್ಹವೆಂದು ಪ್ರಕರಣ ಪಟ್ಟಿ ಮಾಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಲಬುರಗಿ ಜಿಲ್ಲೆಯಲ್ಲಿನ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಸದಾವಕಾಶ ಇರುತ್ತದೆ. ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಿಡಿಯೋ ಕಾನ್ಪರೆನ್ಸ್ ರೂಮ್‍ನಲ್ಲಿ ರಾಜಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಕಕ್ಷಿದಾರರು ನ್ಯಾಯಾಲಯ ನಿಗದಿಪಡಿಸಿದ ದಿನದಂದು ರಾಜಿ ಸಂಧಾನದಲ್ಲಿ ಭಾಗವಹಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಕ್ಷಿದಾರರು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಗೆ ಭೇಟಿ ನೀಡಬೇಕೆಂದು ಅವರು ತಿಳಿಸಿದ್ದಾರೆ.