ಜು. 29 ರಂದು ಜಿಲ್ಲಾ ವಿಪತ್ತು ನಿರ್ವಹಣಾಪ್ರಾಧಿಕಾರದಿಂದ ನಂದೂರದಲ್ಲಿ ಅಣುಕು ಪ್ರದರ್ಶನ

ಕಲಬುರಗಿ.ಜು.27:ರಾಸಾಯನಿಕ ದುರಂತದ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಜಿಲ್ಲೆಯ ನಂದೂರ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಡಿಪೋದಲ್ಲಿ ಇದೇ ಜುಲೈ 29 ರಂದು ಬೆಳಿಗ್ಗೆ 9 ಗಂಟೆಗೆ ಅಣುಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ ಮಹಾಂತೇಶ ಮುಡಬಿ ಅವರು ತಿಳಿಸಿದರು.
ಜುಲೈ 29 ರಂದು ರಸಾಯನಿಕ ದುರಂತದ ಬಗ್ಗೆ ಅರಿವು ಮೂಡಿಸಲು ಬುಧವಾರದಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ರಸಾಯನಿಕ ಅವಘಡ ಸಂಭವಿಸಿದ ಅಣುಕ ಪ್ರದರ್ಶನದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಒಂದು ದುರಂತ ಹೇಳಿ ಬರುವುದಿಲ್ಲ. ಆದರಿಂದ ಯಾವುದೇ ಅವಘಡ ಸಂಭವಿಸುವದಕ್ಕಿಂತ ಮುಂಚಿತವಾಗಿ ಅದನ್ನು ತಡೆಗಟ್ಟಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಹಾಗೆ ಮಾಡುವದರಿಂದ ಕೆಲವು ಅನಾಹುತಗಳನ್ನು ತಡೆಗಟ್ಟಬಹುದು ಎಂದರು.
ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ಸುಕೇಶ ವಿ ಮಾತನಾಡಿ, ಪೊಲೀಸ್ ಮತ್ತು ಹೋಮ್‍ಗಾರ್ಡ ಅವರು ಅಣಕು ಪ್ರದರ್ಶನ ಕಾರ್ಯಕ್ರಮ ನಡೆಯುವಾಗ ನಂದೂರು ಕೈಗಾರಿಕಾ ರಸ್ತೆ ನಂದೂರ ಜಂಕ್ಷನ್ ಕೈಗಾರಿಕಾ ಪ್ರದೇಶದ ಪ್ರವೇಶದ್ವಾರ ಮತ್ತು ಪ್ರದರ್ಶನಕ್ಕೆ ನಿಗದಿಪಡಿಸಲಾದ ಇತರ ಪ್ರದೇಶದಲ್ಲಿ ಸಂಚಾರ ನಿಯಂತ್ರಣ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.
ಆರೋಗ್ಯ ಇಲಾಖೆಯು ಶಿಬಿರದಲ್ಲಿ ಒಂದು ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೊಠಡಿಯನ್ನು ಜನರನ್ನು ಸ್ಥಳಾಂತರಿಸಲು 10 ಜನರನ್ನೊಳಗೊಂಡ ಒಂದು ಡಾಕ್ಟರ ತಂಡ ನಿಯೋಜಿಸಬೇಕು. ಅದರಂತೆ ಆರೋಗ್ಯ ಚಟುವಟಿಕೆಗಳ ವ್ಯವಸ್ಥೆ ಮತ್ತು ಮೇಲ್ವಿಚಾರಣೆ ಮೇಲಿನ ಕಾರ್ಯಕ್ರಮಕ್ಕಾಗಿ ವೈದ್ಯರು ಮತ್ತು ದಾದಿಯರ ವ್ಯವಸ್ಥೆ ಮಾಡಬೇಕೆಂದು ಮಹಾಂತೇಶ ಮುಡಬಿ ಅವರು ಹೇಳಿದರು.
ಘಟನಾ ಸ್ಥಳದಿಂದ ಶಿಬಿರಕ್ಕೆ 50 ಜನರನ್ನು ಸ್ಥಳಾಂತರಿಸಲು ಆರ್‍ಟಿಓ 2 ಬಸ್ 1 ಮಿನಿ ಬಸ್‍ಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಘಟನೆಯ ನಿಯಂತ್ರಕರು ಈಆರ್‍ಟಿ ತಂಡ, ಅಗ್ನಿಶಾಮಕ ದಳದ ತಂಡದವರು ತುರ್ತು ವಿಭಾಗದೊಂದಿಗೆ ಸೈಟಿನ ಹತ್ತಿರ ಇದ್ದು, ವಿವಿಧ ತಂಡದ ಮುಖ್ಯಸ್ಥರಿಗೆ ಆಜ್ಞೆಗಳನ್ನು ರವಾನಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಎನ್‍ಡಿಆರ್‍ಎಫ್ ಚೀಫ್ ಕಮಾಂಡೆಂಟ್ ದಾಮೋದರ ಸಿಂಗ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಾಣಿಕರಾವ ರಘೋಜಿ, ಜಿಲ್ಲಾ ವಿಪತ್ತು ನಿರ್ವಹಣ ಪರಿಣಿತಿ ಉಮೇಶ ಬಿರಾದಾರ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದರು.