ಮುಳಬಾಗಿಲು,ಜು.೨೬- ರೈತರಿಗೆ ನೀಡುವ ಹಾಲಿನ ಬೆಲೆ ೨.೫೦ ರೂಪಾಯಿ ಇಳಿಕೆ ಮಾಡಿರುವ ಅವೈಜ್ಞಾನಿಕ ಆದೇಶವನ್ನು ವಾಪಸ್ ಪಡೆದು ಪ್ರತಿ ಲೀಟರ್ ಗೆ ೪೦ ರೂಪಾಯಿ ಹಾಲಿನ ಬೆಲೆ ನಿಗಧಿ ಮಾಡಬೇಕೆಂದು ಸಹಕಾರ ಸಚಿವರನ್ನು ಒತ್ತಾಯಿಸಿ ಜು.೨೮ರ ಶುಕ್ರವಾರ ಹಸುಗಳ ಸಗಣಿ ಸಮೇತ ಕೆಎಂಎಫ್ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬೆಲೆ ಏರಿಕೆ ಹಾಗೂ ಬೆಳೆಗಳಿಗೆ ಬಾಧಿಸುತ್ತಿರುವ ರೋಗ ನಿಯಂತ್ರಣಕ್ಕೆ ಬಾರದೆ ಖಾಸಗಿ ಸಾಲಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮ ಕ್ಷೇತ್ರದ ದಿನೇದಿನೇ ದುಬಾರಿಯಾಗುತ್ತಿದೆ. ಸರ್ಕಾರ ನಂದಿನಿ ಹಾಲಿನ ಬೆಲೆ ೩ ರೂಪಾಯಿ ಏರಿಕೆ ಮಾಡಿ ಹಾಲು ಉತ್ಪಾದಕರಿಗೆ ನೀಡುತ್ತೇವೆಂದು ಹಾಲು ಒಕ್ಕೂಟದ ಅಧ್ಯಕ್ಷರು ಹೇಳಿಕೆ ನೀಡಿರುವ ಬೆನ್ನಲ್ಲಿಯೇ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡರು ಹಾಲಿನ ಬೆಲೆ ೨.೫೦ ರೂಪಾಯಿ ಇಳಿಕೆ ಮಾಡುವ ಮುಖಾಂತರ ನೊಂದು ಬೆಂದಿರುವ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ದುಬಾರಿಯಾಗಿರುವ ಪಶು ಆಹಾರ ಹಸುಗಳಿಗೆ ಬಾಧಿಸುತ್ತಿರುವ ರೋಗ ನಿಯಂತ್ರಣಕ್ಕೆ ಬಾರದೆ ಹೈನೋದ್ಯಮ ಸಂಕಷ್ಟದಲ್ಲಿರುವ ಜೊತೆಗೆ ಪ್ರತಿ ಹಾಲು ಬೆಲೆ ಏರಿಕೆ ಮಾಡಿದಾಗ ಖಾಸಗಿ ಹಿಂಡಿ ಬೂಸ ಅಂಗಡಿ ಮಾಲೀಕರು ಪ್ರತಿ ಮೂಟೆ ಮೇಲೆ ೧೦೦ ರಿಂದ ೨೦೦ ರೂಪಾಯಿವರೆಗೆ ತಮಗಿಷ್ಟ ಬಂದ ರೀತಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಅಧ್ಯಕ್ಷರು ಹಾಲು ಬೆಲೆ ಇಳಿಕೆ ಮಾಡಿದಂತೆ ಖಾಸಗಿ ಪಶು ಆಹಾರದ ಬೆಲೆಯನ್ನೂ ಇಳಿಕೆ ಮಾಡಲಿ. ಅದನ್ನು ಬಿಟ್ಟು ಒಕ್ಕೂಟ ನಷ್ಟದ ನೆಪದಲ್ಲಿ ರೈತರ ಮೇಲೆ ಬೆಲೆ ಇಳಿಕೆ ಎಂಬ ಬ್ರಹ್ಮಾಸ್ತ್ರ ಸರಿಯಿಲ್ಲ ಎಂದು ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ೧ ಲೀಟರ್ ಹಾಲು ಉತ್ಪಾದನೆ ಮಾಡಬೇಕಾದರೆ ಕನಿಷ್ಠ ೨೮ರೂಪಾಯಿ ಖರ್ಚು ಬರುವ ಜೊತೆಗೆ ರೋಗ ನಿಯಂತ್ರಣಕ್ಕೆ ೧೦ರೂಪಾಯಿ ಒಟ್ಟು ೩೮ರೂಪಾಯಿ ಖರ್ಚು ಬರುತ್ತಿದೆ. ಕಡೆಯದಾಗಿ ಹೈನೋದ್ಯಮವನ್ನೇ ನಂಬಿ ಮನೆಯ ಯಜಮಾನಿಯರು ಮಕ್ಕಳ ವಿದ್ಯಾಭ್ಯಾಸ, ಸ್ತ್ರೀಶಕ್ತಿ ಸಾಲಗಳ ಕಂತುಗಳು ಹಿರಿಯರ ಆರೋಗ್ಯಕ್ಕೆ ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿಯ ಜೊತೆಗೆ ಕಡೆಯದಾಗಿ ಹೈನೋದ್ಯಮದಲ್ಲಿ ಹಸುವಿನ ಸಗಣಿ ಮತ್ತು ಗಂಜಲ ಮಾತ್ರ ಉಳಿಯುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನಂದಿನಿ ಹಾಲಿನ ಮೇಲೆ ಏರಿಕೆ ಮಾಡಿರುವ ೩ ರೂಪಾಯಿಗಿಂತ ೧೦ ರೂಪಾಯಿ ರೈತರ ಹಾಲು ಉತ್ಪಾದನೆಯ ಬೆಲೆ ಏರಿಕೆ ಮಾಡಬೇಕು. ಅದನ್ನು ಬಿಟ್ಟು ಇಳಿಕೆ ಮಾಡುವ ಮುಖಾಂತರ ಬಿಕ್ಷುಕರ ರೂಪದಲ್ಲಿ ಹೈನೋದ್ಯಮ ಉತ್ಪಾದಕರಿಗೆ ೫೦ ಪೈಸೆ ನೀಡುತ್ತೇವೆಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.