ಜು. 28 ಕೆಂಪೇಗೌಡ ಜಯಂತಿ

ಕನಕಪುರ, ಜು. ೨೩:ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ೫೧೩ ನೇ ಜಯಂತೋತ್ಸವವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ ೨೪ ರಂದು ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಸಮಿತಿ ವತಿಯಿಂದ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಜಯಂತೋತ್ಸವ ಸಮಿತಿ ಸದಸ್ಯರು ತಿಳಿಸಿದರು.
ಇಲ್ಲಿನ ರೋಟರಿ ಭವನದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಸಮಿತಿ ವತಿಯಿಂದ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಜಯಂತಿ ಆಚರಣೆ ಕುರಿತು ಸದಸ್ಯರು ಮಾಹಿತಿ ನೀಡಿದರು.
ಕೆಂಪೇಗೌಡರ ಜಯಂತಿಯನ್ನು ಪ್ರಪ್ರಥಮ ಬಾರಿಗೆ ಕನಕಪುರದಲ್ಲಿ ಆಚರಣೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಯಶಸ್ವಿಗೆ ಸಮುದಾಯದ ಮುಖಂಡರುಗಳ ಹೋಬಳಿ ಮಟ್ಟ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಿದ್ದತೆಗಳನ್ನು ನಡೆಸಲಾಗಿದೆ. ಸುಮಾರು ೧೦ ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಭಾನುವಾರ ನಡೆಯುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೯ ಗಂಟೆಗೆ ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಸಾಂಸ್ಕೃತಿಕ ಕಲಾತಂಡ ಹಾಗೂ ಪೂರ್ಣ ಕುಂಬಕಳಸದೊಂದಿಗೆ ಮೆರವಣಿಗೆ ಪ್ರಾರಂಭವಾಗಲಿದ್ದು ೧೨ ಗಂಟೆ ವೇಳೆಗೆ ಅಂಬೇಡ್ಕರ್ ಭವನದ ವೇದಿಕೆ ಕಾರ್ಯಕ್ರಮದ ಬಳಿಗೆ ಮೆರವಣಿಗೆ ತಲುಪಲಿದೆ ಎಂದು ಮಾಹಿತಿ ನೀಡಿದರು.
ವೇದಿಕೆ ಕಾರ್ಯಕ್ರಮವು ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು ೧ ಸಾವಿರ ಮಂದಿಗೆ ಆಸನದ ವ್ಯವಸ್ಥೆಯನ್ನು ಮಾಡಿದ್ದು ಉಳಿದಂತೆ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಶ್ಯಾಮಿಯಾನ ಹಾಕಿ ಕಾರ್ಯಕ್ರಮದ ವೀಕ್ಷಣೆಗೆ ಡಿಜಿಟಲ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ, ಅದರ ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆಲ್ಲಾ ಊಟದ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕೆಂಪೇಗೌಡರ ಜಯಂತೋತ್ಸವದಲ್ಲಿ ತಾಲ್ಲೂಕಿನ ಎಲ್ಲಾ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದ್ಯ ಎಸ್.ರವಿ ಸೇರಿದಂತೆ ಸಮುದಾಯದ ಮುಖಂಡರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಡಕ ೯೫ ಕ್ಕಿಂತ ಹೆಚ್ಚು ಅಂಕಗಳಿಸಿದ ಸಮುದಾಯದ ಮಕ್ಕಳಿಗೆ ಹಾಗೂ ಉನ್ನತ ವ್ಯಾಸಂಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಉತ್ತಮ ಸಾಧನೆ ಮಾಡಿರುವವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ೧೦ ಮಂದಿಗೆ ಸನ್ಮಾನ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಸಾಮೂಹಿಕ ನಾಯಕತ್ವದಲ್ಲಿ ಆಚರಣೆ ಮಾಡುತ್ತಿದ್ದು ಕಾರ್ಯಕ್ರಮದ ಯಶಸ್ವಿಗೆ ೫ ತಂಡಗಳನ್ನು ರಚನೆ ಮಾಡಿದ್ದು ಆ ತಂಡಗಳಿಗೆ ತಮ್ಮ ಜವಬ್ದಾರಿಯನ್ನು ನಿರ್ವಹಿಸಲಿವೆ, ಕಾರ್ಯಕ್ರಮದಲ್ಲಿ ಯಾವುದು ಕೊರತೆ ಬಾರದಂತೆ ಕ್ರಮವಹಿಸಿದ್ದು ಸಮುದಾಯದ ಮುಖಂಡರು ತನು, ಮನ, ದನವನ್ನು ನೀಡಿದ್ದಾರೆ. ಕಾಯ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸಮತಿ ಸದಸ್ಯರು ಮಾಹಿತಿ ನೀಡಿದರು.
ಸಮಿತಿ ಸದಸ್ಯರಾದ ಎಂ.ಡಿ.ವಿಜಯದೇವು, ಕುಮಾರಸ್ವಾಮಿ, ಕಬ್ಬಾಳೇಗೌಡ, ಚಿಕ್ಕೆಂಪೇಗೌಡ, ಟಿ.ವಿ.ಪ್ರಕಾಶ್, ಬಿ.ಎಸ್.ಗೌಡ, ಪುಟ್ಟಸ್ವಾಮಿ, ಬಸವರಾಜು, ಮುನಿಲಿಂಗಯ್ಯ, ಹುಚ್ಚಪ್ಪ, ನಾಗೇಶ್, ಟಿವಿಎನ್. ಪ್ರಸಾದ್, ಶಿವರಾಜ್‌ಗೌಡ, ಪುಟ್ಟರಾಮು, ಲಕ್ಷ್ಮಿದೇವಮ್ಮ, ಸುವರ್ಣಮ್ಮ ಉಪಸ್ಥಿತರಿದ್ದರು.