
ತಿಪಟೂರು, ಜು. ೨೦- ನಮ್ಮೂರಿನವರೇ ಆದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರು ಹುಟ್ಟಿ ಜುಲೈ ೨೪ಕ್ಕೆ ೧೦೦ ವರ್ಷಗಳು ಸಂದಿರುವ ಈ ಶುಭ ಸಂದರ್ಭದಲ್ಲಿ ಅವರ ನೆನಪಿಗಾಗಿ ತಾಲ್ಲೂಕು ಆಡಳಿತ ಮತ್ತು ಹಾಸ್ಯ ಚಕ್ರವರ್ತಿ ನರಸಿಂಹರಾಜು ಅಭಿಮಾನಿಗಳ ಬಳಗ ( ತಿಪಟೂರಿನ ಎಲ್ಲ ಸಂಘ ಸಂಸ್ಥೆಗಳ ಒಕ್ಕೂಟ ) ದಿಂದ ಜು. ೨೪ ರಂದು ಸಂಜೆ ೬ ಗಂಟೆಗೆ ತಿಪಟೂರಿನ ಹಾಸ್ಯಚಕ್ರವರ್ತಿ ನರಸಿಂಹರಾಜು ರಂಗ ಮಂದಿರದಲ್ಲಿ ಶಾಸಕ ಕೆ ಷಡಕ್ಷರಿ ರವರ ಅಧ್ಯಕ್ಷತೆಯಲ್ಲಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುಲಾಗಿದೆ ಎಂದು ಅಭಿನಯ ತಂಡದ ಅಧ್ಯಕ್ಷ ಡಿ.ವಿ.ಎಸ್. ಗುಪ್ತ ತಿಳಿಸಿದರು.
ನಗರದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಸಂಜೆ ೬ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಚಿತ್ರನಟಿ ಸುಧಾ ನರಸಿಂಹರಾಜು ಮತ್ತು ಕುಟುಂಬದವರು ಭಾಗವಹಿಸುವರು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು, ಕಲಾವಿದರು, ಕಲಾ ಪೋಷಕರು, ಹಿರಿಯರು ಭಾಗವಹಿಸಲಿದ್ದಾರೆ.
ಸಂಜೆ ೭ ಕ್ಕೆ ನರಸಿಂಹರಾಜು ಅವರ ಸ್ಮರಣೆಗಾಗಿ ೧೦೦ ಜ್ಯೋತಿಗಳನ್ನು ಬೆಳಗಿಸುವ ಜತೆಗೆ ಇಡೀ ನಗರದ ಮನೆ ಮನೆಯಲ್ಲಿ ೧೦ ನಿಮಿಷ ಜ್ಯೋತಿ ಅಥವಾ ಮೋಬೈಲ್ ಟಾರ್ಚ್ ಬೆಳಗಿಸುವ ಮೂಲಕ ಅವರಿಗೆ ನೂರು ವರ್ಷದ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ನರಸಿಂಹರಾಜು ಅವರ ರಂಗೋಲಿ ಚಿತ್ರ ಬಿಡಿಸಿ ಅಲಂಕಾರ, ಅವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಜತೆಗೆ ಸಭಾ ಕಾರ್ಯಕ್ರಮದಲ್ಲಿ ನರಸಿಂಹರಾಜು ಕುಟುಂಬವನ್ನು ಸನ್ಮಾನಿಸಲಾಗುವುದು ಎಂದರು.
ನಂತರ ಅವರ ಒಂದು ಹಾಸ್ಯ ಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ.
ಶಾಸಕರ ಇಚ್ಚೆಯಂತೆ ರಂಗಮಂದಿರ ಪೂರ್ಣಗೊಂಡ ನಂತರ ಮೂರು ತಿಂಗಳ ನಂತರ ಒಂದು ವಾರದ ಕಾಲ ಅವರ ನೆನಪಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಿಪಟೂರಿನ ಪ್ರಮುಖ ರಸ್ತೆಗೆ ಅವರ ಹೆಸರಿಡುವುದು, ಅವರ ಮನೆಯನ್ನು ವಸ್ತು ಸಂಗ್ರಹಾಲಯ ಮಾಡುವುದು, ಅವರ ಮರಣೋತ್ತರ ಪ್ರಶಸ್ತಿಗೆ ಒತ್ತಾಯಿಸುವುದು ಸೇರಿದಂತೆ ವರ್ಷಪೂರ್ತಿ ಅವರ ನೆನಪಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿತಿಪಟೂರು ಕೃಷ್ಣ, ಜ್ಯೋತಿಗಣೇಶ್, ಎ.ಟಿ. ಪ್ರಸಾದ್, ಓಹಿಲಾ ಗಂಗಾಧರ್, ಕೆ.ಎಮ್. ರಾಜಣ್ಣ, ತೋಂಟರಾದ್ಯ, ತರಕಾರಿ ಗಂಗಾಧರ್, ಸಂಸ್ಕಾರ ಭಾರತಿ ರಾಜೀವ್ ಲೋಚನ್, ಶ್ರೀಧರ್ ಲಕ್ಕವಳ್ಳಿ, ವಿಶ್ವನಾಥ್, ಕದಳಿ ಬಳಗ, ಇನ್ನರ್ ವೀಲ್ ಕ್ಲಬ್, ರೋಟರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ರಕ್ಷಣಾ ವೇದಿಕೆ, ಹೇಮಲತಾ ಕಲಾವೃಂದ, ಕಲ್ಪಶ್ರೀ ಕಲಾವಿದರ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ದಿನಸಿ ವರ್ತಕರ ಸಂಘ ಇತರೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.