ತಾಳಿಕೋಟೆ:ಜು.19: ಯುಗವತಾರಿ ಯುಗಪುರುಷರ ಜನ್ಮಭೂಮಿಯಾದ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಅಥವಾ ಕೊಲ್ಲುನಪಾಕಿ ಹೆಸರಿನಿಂದ ಕರಿಯುತ್ತಿರುವ ಸುಕ್ಷೇತ್ರದಲ್ಲಿ ಶ್ರಾವಣ ಮಾಸದ 48 ದಿನಗಳ ಕಾಲ ತಾಳಿಕೋಟೆ ತಾಲೂಕಿನ ಸುಕ್ಷೇತ್ರ ಗುಂಡಕನಾಳದ ಬೃಹನ್ಮಠದ ಸ್ಥಿರಚರ ಪಟ್ಟಾಧ್ಯಕ್ಷರು ಪೂಜಾ ಅನುಷ್ಠಾನ ಮೂರ್ತಿಗಳಾದ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ಮೌನಾನಷ್ಠಾನ ಕೈಗೊಳ್ಳಲಿದ್ದಾರೆ.
ವಿಶೇಷವಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಶ್ರಾವಣ ಮಾಸದಲ್ಲಿ ಇದೇ ದಿ. 23-7-2023 ರಿಂದ 21-8-2023 ರವರಿಗೆ ಒಂದು ತಿಂಗಳ ಪರ್ಯಂತರ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದಂಗಳವರ ಕೃಪಾಶಿರ್ವಾದದೊಂದಿಗೆ ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬಂಡೆಪ್ಪನಹಳ್ಳಿಯ ಶ್ರೀ ಬಂಡಿ ಸ್ವಾಮಿಯ ಗದ್ದಿಗೆಯಲ್ಲಿ 2007ನೇ ಸಾಲಿನಲ್ಲಿ 48 ದಿವಸಗಳ ಕಾಲ ನಿರಾಹಾರ ಮೌನಾನುಷ್ಠಾನ ಮಾಡಿದವರಾಗಿದ್ದಾರೆ ಅಲ್ಲದೇ 2016 ನೇ ಸಾಲಿನಲ್ಲಿ ಗುಂಡಕನಾಳ ಗ್ರಾಮದ ಶ್ರೀ ಗುರುಲಿಂಗೇಶ್ವರ ಮಠದ ನೂತನ ಕಟ್ಟಡದ ಉದ್ಘಾಟನೆಯ ಸಮಯದಲ್ಲಿಯೂ 21 ದಿನಗಳ ಕಾಲ ಲೋಕಕಲ್ಯಾಣಾರ್ಥವಾಗಿ ನಿರಾಹಾರ ಮೌನಾನುಸ್ಥಾನ ಮಾಡಿ ಭಕ್ತೋದ್ದಾರಕ್ಕೆ ಶ್ರಮಿಸಿದ ಶ್ರೀಗಳೆಂದು ಗುರುತಿಸಿಕೊಂಡಿದ್ದಾರೆ.
ಮೌನಾನುಷ್ಠಾನಕ್ಕಿರುವ ಶಕ್ತಿ ಏನು?
ಪರಶಿವನಿಗೆ ಪಂಚಮುಖಗಳು. ಶಿವನ ಸದ್ಯೂಜಾತ ಮುಖದಿಂದ ಕೊಲ್ಲಿಪಾಕಿ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿ ಆದರ್ಶ ಮೌಲ್ಯಗಳನ್ನು ಬೋಧಿಸಿ ಬೆಳೆಸಿ ಜಾತಿ ಮತ ಪಂಥಗಳ ಗಡಿ ಮಿರಿ ವಿಶ್ವ ಬಂದುತ್ವ ಮತ್ತು ಮಾನವೀಯ ಆದರ್ಶ ಮೌಲ್ಯವನ್ನು ಪ್ರತಿಪಾದಿಸಿದ ಉತ್ಕೃಷ್ಟ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಸಮಾಜದಲ್ಲಿ ಬೆಳಕಿನಲ್ಲಿವೆ.
ತ್ರಿಲಿಂಗ ದೇಶವಾದ ತೆಲಂಗಾಣದ ಕೊಲ್ಲಿಪಾಕಿಯ ಶ್ರೀ ಸೋಮೇಶ್ವರ ಲಿಂಗದಿಂದ ಆವಿರ್ಭವಿಸಿ ಕರ್ನಾಟಕದ ಮಲೆಯಾಚಲ ಪರ್ವತದ ಶ್ರೇಣಿಗೆ ದಯಮಾಡಿಸಿ ಅಗಸ್ತ್ಯ ಮಹರ್ಷಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಶ್ರೀ ಸಿದ್ಧಾಂತ ಶಿಖಾಮಣಿಯಂತ ಜ್ಞಾನಗಂಗೋತ್ರಿಯನ್ನ ಜಗದ್ಗುರು ಶ್ರೀ ರೇಣುಕಾಚಾರ್ಯರು ಪಸರಿಸಿದ್ದಾರೆ.
ಕೇವಲ ಧಾರ್ಮಿಕ ಕ್ರಾಂತಿಯೇ ಮೀಸಲಾಗಿರಿಸದೆ ಅದನ್ನು ಸಾಮಾಜಿಕ ಕ್ರಾಂತಿಯ ಕಿಡಿಯನ್ನಾಗಿ ಪರಿವರ್ತಿಸಿ ಆ ಕಾಲದಲ್ಲಿ ದಲಿತನಾಗಿದ್ದ ಅಗಸ್ತ್ಯ ಮಹರ್ಷಿಗೆ ಜ್ಞಾನ ದೀಕ್ಷೆಯನ್ನು ಕೊಟ್ಟು ಅವರಿಗೆ ಆಧ್ಯಾತ್ಮಿಕ್ರಾಂತಿಯನ್ನು ತಂದುಕೊಟ್ಟ ಧೀಮಂತರು, ವಿಭೀಷಣನ ಪ್ರಾರ್ಥನೆಗೆ ಓಗೊಟ್ಟು ರಾವಣನ ಮೂರು ಕೋಟಿ ಲಿಂಗ ಸ್ಥಾಪನೆಯ ಸಂಕಲ್ಪವನ್ನು ಈಡೇರಿಸಿಕೊಟ್ಟ ಶ್ರೀ ಜಗದ್ಗುರು ರೇಣುಕಾಚಾರ್ಯರು ರಾವಣನ ಜೀವನವನ್ನು ಪಾವನಗೊಳಿಸಿ ಆತನ ಶಿವಭಕ್ತಿ ಹಾಗೂ ಶಿವನಿಷ್ಠೆಯನ್ನು ಜಗತ್ತಿಗೆ ತೋರಿದರು. ಚಂಡ ಪ್ರಚಂಡರನ್ನು ಉದ್ದರಿಸಿ ಅವರಿಗೂ ದಾರಿದೀಪವಾದವರು ಅಲ್ಲದೇ ತಮ್ಮ ಕಾರ್ಯಕ್ಷೇತ್ರವಾದ ಕೊಲ್ಲಿಪಾಕಿಯಲ್ಲಿ ಕುಲ 18 ನೆಲೆಯ ಜನರನ್ನು ಸಂಘಟಿಸಿ ದೀಕ್ಷಾಧಿ ಧಾರ್ಮಿಕ ಸಂಸ್ಕಾರಗಳಿಂದ ಉದ್ದರಿಸಿದ ಕುರುಹುವಾಗಿ ಇಂದಿಗೂ ಕೂಡ ಅಷ್ಟಾದಶ ಮಠಗಳು ಅಲ್ಲಿ ಅಸ್ತಿತ್ವದಲ್ಲಿರುವುದನ್ನು ಕಾಣುತ್ತೇವೆ ಇಂತಹ ಪಾವನ ನೆಲದಲ್ಲಿ ದೇಶದ ಜನರ ಒಳಿತಿಗಾಗಿ ತಾಳಿಕೋಟೆ ತಾಲೂಕಿನ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನಕ್ಕೆ ಮುಂದಾಗಿರುವದು ಈ ಭಾಗದ ಭಕ್ತರಲ್ಲಿ ಭಕ್ತಿಯ ಪರಾಕಾಷ್ಟೇಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.