ಜು.23 ರಂದು ಜಿಲ್ಲಾ ಕಾನಿಪ ಸಂಘದಿಂದ ಅರ್ಥಪೂರ್ಣವಾಗಿ ಪತ್ರಿಕಾ ದಿನ ಆಚರಿಸಲು ನಿರ್ಧಾರ

ವಿಜಯಪುರ, ಜು.13-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕವು ಇದೇ ದಿ. 23 ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅರ್ಥಪೂರ್ಣವಾಗಿ ಪತ್ರಿಕಾ ದಿನ ಆಚರಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಎಸ್ಪಿ, ಡಿಸಿ, ಜಿ.ಪಂ ಸಿಇಓ, ಮಹಾನಗರ ಪಾಲಿಕೆ ಆಯುಕ್ತರು, ಕೆಯುಡಬ್ಲ್ಯೂಜೆ ವಿಜಯಪುರ ಜಿಲ್ಲಾ ಉಸ್ತುವಾರಿಗಳನ್ನು ಹಾಗೂ ಉಪನ್ಯಾಸಕರನ್ನಾಗಿ ಹಿರಿಯ ಪತ್ರಕರ್ತ ಸುಭಾಷ್ ಹೂಗಾರ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

ಕಾರ್ಯಕ್ರಮದಲ್ಲಿ ಆಯ್ದ ಹತ್ತು ಜನ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವುದು, ಹಿರಿಯ ಪತ್ರಕರ್ತರನ್ನು, ಸಲಹಾ ಸಮಿತಿಯ ಸದಸ್ಯರನ್ನು ಹಾಗೂ ಐಎಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಇಬ್ಬರು ಸಾಧಕರನ್ನು ಸನ್ಮಾನಿಸುವುದು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪೆÇ್ರೀತ್ಸಾಹಿಸಲು ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ ಅವರು ಮಾತನಾಡಿ, ಸಂಘದ ಎಲ್ಲ ಸದಸ್ಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ ಉಳ್ಳಾಗಡ್ಡಿ, ಆಸೀಫ್ ಬಾಗವಾನ, ಅವಿನಾಶ ಬಿದರಿ, ನಾಮನಿರ್ದೇಶಿತ ಸದಸ್ಯ ಗುರು ಗದ್ದನಕೇರಿ ಸಲಹಾ ಸಮಿತಿ ಸದಸ್ಯರಾದ ಸೀತಾರಾಮ ಕುಲಕರ್ಣಿ, ಅಶೋಕ ಯಡಹಳ್ಳಿ, ಶರಣಬಸಪ್ಪ ಮಸಳಿ, ದೇವೇಂದ್ರ ಹೆಳವರ, ರಾಜು ಕೊಂಡಗೂಳಿ, ವಿಶೇಷ ಆಹ್ವಾನಿತರಾಗಿ ಶ್ರೀಮತಿ ಕೌಶಲ್ಯ ಪನ್ನಾಳಕರ, ಸಂಘದ ಬಸವನ ಬಾಗೇವಾಡಿ ತಾಲೂಕು ಘಟಕದ ಅಧ್ಯಕ್ಷ ಅಜೀಜ್ ಬಳಬಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.