ಜು.21ರಂದು ಪಟ್ಟಣಕ್ಕೆ ಸಿ.ಎಂ: ಸಮರೋಪಾದಿಯಲ್ಲಿ ಸ್ವಚ್ಚತಾ ಕಾರ್ಯ

ಕೆ.ಆರ್.ಪೇಟೆ. ಜು.18:- ಇದೇ 21ರ ಗುರುವಾರ ಪಟ್ಟಣಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸಚಿವರುಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತವು ಪಟ್ಟಣದ ಸ್ವಚ್ಚತಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ.
ಪಟ್ಟಣಕ್ಕೆ ಎಲ್ಲಾ ಮಾರ್ಗಗಳಿಂದ ಆಗಮಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಇದ್ದ ತ್ಯಾಜ್ಯಗಳನ್ನು ತೆಗೆದು ಶುಚಿಗೊಳಿಸಲಾಗಿದೆ. ದೇವೀರಮ್ಮಣ್ಣಿ ಕೆರೆಯ ಏರಿಯ ಮೇಲಿದ್ದ ಗಿಡಗಂಟಿಗಳು ಹಾಗು ರಾಶಿರಾಶಿ ಮಣ್ಣಿನ ಗುಡ್ಡೆಗಳನ್ನು ಸಮತಟ್ಟುಮಾಡಲಾಗಿದೆ. ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ ಎಲ್ಲಾ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಗುಂಡಿಬಿದ್ದಿರುವ ರಸ್ತೆಗಳ ಗುಂಡಿಮುಚ್ಚಲಾಗುತ್ತಿದೆ. ಅಂಗಡಿಮುಂಗಟ್ಟುಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಇಟ್ಟುಕೊಳ್ಳುತ್ತಿದ್ದ ಎಲ್ಲಾ ಮಾರಾಟದ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ. ಪುಟ್‍ಪಾತ್‍ನಲ್ಲಿ ಮತ್ತು ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಕೆಲವು ದಿನಗಳವರೆಗೆ ರಜೆ ಮಾಡುವಂತೆ ತಿಳಿಸಲಾಗಿದೆ. ರಸ್ತೆಗಳಲ್ಲಿ ಸಚಿವ ನಾರಾಯಣಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರುವ ಪ್ಲೆಕ್ಸ್‍ಗಳು ರಾರಾಜಿಸುತ್ತಿವೆ.
ತಹಶೀಲ್ದಾರ್ ಎಂ.ವಿ.ರೂಪ, ಪುರಸಭಾ ಮುಖ್ಯಾಧಿಕಾರಿ ಕುಮಾರ್, ಪಟ್ಟಣ ಠಾಣೆಯ ಪೊಲೀಸ್ ನಿರೀಕ್ಷಕ ದೀಪಕ್, ಪಿಎಸ್‍ಐ ಸುನಿಲ್ ನೇತ್ರøತ್ವದಲ್ಲಿ ಪಟ್ಟಣದಾದ್ಯಂತ ಸಾರ್ವಜನಿಕರಿಗೆ ಬೀದಿಬದಿ ವ್ಯಾಪಾರಿಗಳಿಗೆ, ಬಾರ್ ಮತ್ತು ರೆಸ್ಟೋರೆಂಟ್‍ಗಳ ಮಾಲೀಕರಿಗೆ ಸೂಚನೆಗಳನ್ನು ನೀಡಲಾಗಿದ್ದು ಹತ್ತುಗಂಟೆಯ ಒಳಗೆ ಎಲ್ಲಾ ಅಂಗಡಿಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.