ಜು. 18 ಸಂಸತ್ ಅಧಿವೇಶನ

ನವದೆಹಲಿ, ಜು.೧೬- ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ೨೪ ಮಸೂದೆಗಳು ಚರ್ಚೆ ಮತ್ತು ಅಂಗೀಕಾರಕ್ಕೆ ಬರಲಿವೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದೆ.
ಮಂಗಳವಾರ ಸಂಸತ್ತಿನ ಕಲಾಪಗಳು ಆರಂಭವಾಗಲಿದ್ದು, ಈ ಅಧಿವೇಶನದಲ್ಲಿ ಒಟ್ಟು ೨೪ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ಕೇಂದ್ರಸರ್ಕಾರ ತಯಾರಿ ನಡೆಸಿದೆ.
ಈ ಮುಂಗಾರು ಅಧಿವೇಶನದಲ್ಲಿ ಭಾರತೀಯ ಅಂಟಾರ್ಟಿಕಾ ಮಸೂದೆ-೨೦೨೨, ಅಂತರ್‌ರಾಜ್ಯ ನದಿನೀರು ತಿದ್ದುಪಡಿ ಮಸೂದೆ- ೨೦೧೯, ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ-೨೦೨೨, ಕೌಟುಂಬಿಕ ನ್ಯಾಯಾಲಯಗಳ ತಿದ್ದುಪಡಿ ಮಸೂದೆ-೨೦೨೨, ವನ್ಯಜೀವಿ(ರಕ್ಷಣೆ) ತಿದ್ದುಪಡಿ ಮಸೂದೆ-೨೦೨೧, ಕಡಲ ಕಳ್ಳತರ ವಿರೋದಿ ಮಸೂದೆ-೨೦೧೯, ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಮಸೂದೆ-೨೦೨೧, ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ-೨೦೧೯. ಅನಿವಾಸಿ ಭಾರತೀಯರ ವಿವಾಹ ನೋಂದಣಿ ಮಸೂದೆ-೨೦೧೯, ಕೀಟನಾಶಕ ನಿರ್ವಹಣಾ ಮಸೂದೆ-೨೦೨೦ ಸೇರಿದಂತೆ ಸುಮಾರು ೨೪ ಮಸೂದೆಗಳು ಈ ಅಧಿವೇಶನದಲ್ಲಿ ಚರ್ಚೆ ಅಂಗೀಕಾರಕ್ಕೆ ಬರಲಿವೆ.
ಸಂಸತ್ತಿನ ಮುಂಗಾರು ಅಧಿವೇಶನ ಜು. ೧೮ ಸೋಮವಾರದಿಂದ ಆರಂಭವಾಗಿ ಆ. ೧೨ರವರೆಗೂ ನಡೆಯಲಿದೆ.