ಜು. 18, ಪಶ್ಚಿಮಘಟ್ಟ ಶಾಸಕರ ಸಭೆ

ಬೆಂಗಳೂರು, ಜು.೧೩- ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡು ಭಾಗದ ಶಾಸಕರು ಇದೇ ೧೮ ರಂದು ಸಭೆ ಸೇರಲಿದ್ದಾರೆ.
ಗೃಹ ಸಚಿವ ಅರಗಜ್ಞಾನೇಂದ್ರ ಅವರು ಇದೇ ತಿಂಗಳ ೧೮ರಂದು ಮಲೆನಾಡು ಭಾಗದ ಶಾಸಕರ ಸಭೆ ಕರೆದಿದ್ದು, ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಪಶ್ಚಿಮಘಟ್ಟ ಕರಡು ಅಧಿಸೂಚನೆ ಈ ಪ್ರದೇಶದಲ್ಲಿ ವಾಸಿಸುವ ಜನತೆಯ ಭವಿಷ್ಯಕ್ಕೆ ಮಾರಕವಾಗಿದೆ. ಈ ಅಧಿಸೂಚನೆಯನ್ನು ಜಾರಿ ಮಾಡದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಈ ಸಭೆಯನ್ನು ಗೃಹ ಸಚಿವರು ಕರೆದಿದ್ದಾರೆ.
ಒಂದು ವೇಳೆ ಈ ಅಧಿಸೂಚನೆ ಅನುಷ್ಠಾನಗೊಂಡರೆ ಮಲೆನಾಡು ನಿವಾಸಿಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತವೆ. ಅಭಿವೃದ್ಧಿ ಕುಂಠಿತವಾಗುತ್ತವೆ. ಜತೆಗೆ ಆ ಭಾಗದ ಜನ ತೀವ್ರ ಆರ್ಥಿಕ ತೊಂದರೆಗೂ ಸಿಲುಕುತ್ತಾರೆ. ಹಾಗಾಗಿ ಈ ಅಧಿಸೂಚನೆಯನ್ನು ಜಾರಿಮಾಡದಂತೆ ಕೇಂದ್ರವನ್ನು ಒತ್ತಾಯಿಸಲು ಈ ಸಭೆ ನಡೆಸಲಾಗುತ್ತದೆ.
ಈ ಹಿಂದೆ ಡಾ. ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಕರ್ನಾಟಕ ತಿರಸ್ಕರಿಸಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬುದು ಮಲೆನಾಡು ಭಾಗದ ಶಾಸಕರ ಆಗ್ರಹವಾಗಿದೆ.
ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಕರ್ನಾಟಕ ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಒಟ್ಟು ೫೯,೮೩೬ ಚದುರ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ೨ ತಿಂಗಳು ಕಾಲಾವಕಾಶ ನೀಡಿದೆ.
ಈ ಕರಡು ಅಧಿಸೂಚನೆಗೆ ಮಲೆನಾಡು ಭಾಗದ ಶಾಸಕರಿಂದಿ ತೀವ್ರ ವಿರೋಧ ವ್ಯಕ್ತವಾಗಿದೆ.