ನವದೆಹಲಿ,ಜು.೯- ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಸಭೆ ಇದೇ ತಿಂಗಳ ೧೮ ರಂದು ನಡೆಯಲಿದ್ದು ಈ ಸಭೆಗೆ ಬಿಜೆಪಿ ಜತೆ ಕೈಜೋಡಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಭಾಗಿಯಾಗುವ ಸಾಧ್ಯತೆಗಳಿವೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್, ಹಿಂದೂಸ್ತಾನ್ ಆವಾಮ್ ಮೋರ್ಚಾದ ನಾಯಕ ಪ್ರಭಾವಿ ದಲಿತ ನಾಯಕ ಜಿತನ್‌ರಾಮ್ ಮಾಂಝಿ ಅವರೂ ಕೂಡ ಎನ್ ಡಿಎ ಸೇರುವ ಸಾಧ್ಯತೆಗಳಿವೆ.
ಶಿವಸೇನೆ, ಎನ್‌ಸಿಪಿ ಬಣಗಳಲ್ಲದೆ, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು, ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಾಹ್ನಿ ಸೇರಿದಂತೆ ಎನ್‌ಡಿಎ ಹಳೆಯ ಮಿತ್ರಪಕ್ಷಗಳನ್ನು ಮತ್ತೆ ಮೈತ್ರಿಕೂಟಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಎನ್ ಡಿಎ ಸಭೆಯಲ್ಲಿ ಎನ್ ಸಿಪಿ ಬಣದ ಅಜಿತ್ ಪವಾರ್ ನೇತೃತ್ವದಲ್ಲಿ ರಾಜ್ಯಸಭೆ ಪ್ರತಿನಿಧಿಸುವ ಪ್ರಫುಲ್ ಪಟೇಲ್ ಭಾಗಿಯಾಗುವ ಸಾಧ್ಯತೆಗಳಿವೆ. ಮಹಾರಾಷ್ಟ್ರದ ೪೮ ಲೋಕಸಭಾ ಸ್ಥಾನಗಳಲ್ಲಿ ೨೦೨೪ರ ಚುನಾವಣೆಯಲ್ಲಿ ಮಿತ್ರ ಪಕ್ಷಗಳಿಗೆ ಸೀಟು ಹಂಚಿಕೆ ಮಾಡಿ ಸ್ಪರ್ಧೆ ನಡೆಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಪ್ರಪುಲ್ ಪಟೇಲ್ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಚಿರಾಗ್ ಪಾಸ್ವಾನ್ ಅವರನ್ನು ಮತ್ತೆ ಎನ್ ಡಿಎ ಕೂಟಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆದಿದ್ದು, ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟು ಚಿರಾಗ್ ಪಾಸ್ವಾನ್ ಅವರಿಗೆ ಸ್ಥಾನ ನೀಡಲು ಮೋದಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಲ್ಜಾತಿಯ ಯಾದವೇತರ ಮತ್ತು ಕುರ್ಮಿಯೇತರ ದಲಿತರ ಕಾಮನಬಿಲ್ಲಿನ ಒಕ್ಕೂಟವನ್ನು ರೂಪಿಸುವ ಬಿಜೆಪಿಯ ಪ್ರಯತ್ನ ಆರಂಭಿಸಿದೆ,
ಮಾಜಿ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ ಮತ್ತು ಶಿರೋಮಣಿ ಅಕಾಲಿದಳವನ್ನೂ ಮತ್ತೆ ಎನ್ ಡಿಎ ಮೈತ್ರಿಕೂಟಕ್ಕೆ ಕರೆ ತರಲು ಚರ್ಚೆ ನಡೆದಿದೆ. ಎನ್ ಡಿಎ ಮಿತ್ರ ಪಕ್ಷಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.