ಜು.17ರಿಂದ ಕ್ಷಯರೋಗ ಪತ್ತೆ ಆಂದೋಲನ

ಕಲಬುರಗಿ,ಜು.8-ಇದೇ ತಿಂಗಳ 17 ರಿಂದ ಆಗಸ್ಟ್ 2 ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ತಿಳಿಸಿದರು. ಸಕ್ರಿಯ ಕ್ಷಯರೋಗ ಆಂದೋಲನಾ ಕಾರ್ಯಕ್ರಮದ ಟಾಸ್ಕ ಫೋರ್ಸ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜು.17 ರಿಂದ ಆಗಸ್ಟ್ 2 ರವರೆಗೆ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆ 3130378 ರಲ್ಲಿ ಸಂಶಯಾಸ್ಪದ 18% ಜನಸಂಖ್ಯೆ ಅಂದರೆ, 553,999 ಜನರನ್ನು ಈ ಕಾರ್ಯಕ್ರಮದಲ್ಲಿ ಗುರುತಿಸಲಾಗಿದೆ. ಇವರು ವಾಸಿಸುವ ನಗರ ಮತ್ತು ಗ್ರಾಮೀಣ ಪ್ರದೇಶಗಳಾದ ಕೊಳಗೇರಿಗಳು (ಸ್ಲಂ), ವಲಸಿಗರು, ಕಾರ್ಖಾನೆಯ ಕಾರ್ಮಿಕ ವರ್ಗದವರು ಕ್ಷಯರೋಗದಿಂದ ಬಳಲುತ್ತಿರುವ ಏರಿಯಾಗಳಲ್ಲಿ ವಾಸಿಸುವರು, ಗಣಿಗಾರಿಕೆಗಳ ಕಾರ್ಮಿಕರು, ಕ್ಷಯರೋಗದಿಂದ ಗುಣಮುಖರಾದ ಏರಿಯಾಗಳು, ಹೆಚ್.ಐ.ವ್ಹಿ ದಿಂದ ಬಳಲುತ್ತಿರುವ ಏರಿಯಾಗಳಲ್ಲಿ ವಾಸಿಸುವವರು, ಸಹವರ್ತಿ ರೋಗಗಳಾದ ರಕ್ತದೊತ್ತಡ, ಸಕ್ಕೆರಕಾಯಿಲೆ, ಹೃದಯ ಕಾಯಿಲೆ, ಕಿಡ್ನಿ ಕಾಯಿಲೆ, ಹಾಗೂ ಡೈಲೈಸಿಸದಲ್ಲಿರುವವರಿಗೆ, ಊದಿಕೊಂಡ ದುಗ್ಧರಸ ಗ್ರಂಥಿಗಳಿರುವವರಿಗೆ ಹಾಗೂ ಇನ್ನಿತರ ರೋಗ ನಿರೋಧಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಮೀಕ್ಷೆಯನ್ನು ಕೈಗೊಂಡು ಸಂಶಯಾಸ್ಪದ ಜನರ ಮನೆ-ಮನೆಯ ಭೇಟಿಯ ಸಂದರ್ಭದಲ್ಲಿ ತಂಡಗಳ ಸದಸ್ಯರಾದ ಹಿರಿಯ/ಕಿರಿಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು, ಸಂಶಯಾಸ್ಪದ ಜನರ ಕಫದ ಮಾದರಿಯನ್ನು ಪಡೆದು ಹತ್ತಿರದ ಆರೋಗ್ಯ ಕೇಂದ್ರಗಳು/ ತಾಲೂಕ ಆಸ್ಪತ್ರೆ/ಜಿಲ್ಲಾ ಆಸ್ಪತ್ರೆಗಳ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಪಾಸಿಟಿವ ಬಂದಿರುವ ರೋಗಿಗಳಿಗೆ ಡಾಟ್ಸ್ ಮುಖಾಂತರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಜಿಲ್ಲೆಯಲ್ಲಿ 84 ಪರೀಕ್ಷಾ ಕೇಂದ್ರಗಳಿದ್ದು 14 ಕ್ಷ-ಕಿರಣ ಯಂತ್ರಗಳು 6 ಸಿಬಿನ್ಯಾಟ್ ಯಂತ್ರಗಳು ( 4 ಸರ್ಕಾರಿ 2 ಖಾಸಗಿ ) ಹಾಗೂ 3 ಟ್ರೂನ್ಯಾಟ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸುಮಾರು 556 ತಂಡಗಳನ್ನು ರಚಿಸಿದ್ದು 1112 ಜನ ತಂಡದ ಸದಸ್ಯರು ಕಾರ್ಯನಿರ್ವಹಿಸುವರು, ಅದೇ ರೀತಿ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಾದ ಮೈರಾಡ್, ಐ.ಸಿ.ಎಮ್.ಆರ್, ಕೆ.ಹೆಚ್.ಪಿ.ಟಿ, ಶೇರ್‍ಇಂಡಿಯಾ, ಹಾಗೂ ಟಾಟಾ ಸಕ್ಷಂ ರವರು ಸಹಕರಿಸುವರು, ಹೆಚ್ಚಿನ ಪ್ರಮಾಣದಲ್ಲಿ ಕ್ಷಯರೋಗಿಗಳ ಪತ್ತೆ ಹಚ್ಚಿ ಚಿಕಿತ್ಸೆ ಮುಂಖಾತರ ಗುಣಮುಖ ಮಾಡುವುದರೊಂದಿಗೆ ಟಿ.ಬಿ ಮುಕ್ತ ಪಂಚಾಯತ್‍ರೊಂದಿಗೆ ಟಿ.ಬಿ.ಮುಕ್ತ ಭಾರತವನ್ನು 2025ರೊಳಗೆ ಮಾಡೋಣವೆಂದರು. ಇದೇ ವೇಳೆ ಅವರು ಭಿತ್ತಿ ಪತ್ರ (ಪೋಸ್ಟರ್)ಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ ಮಾಲಿ, ಜಿಮ್ಸ್ ಆಸ್ಪತ್ರೆಯ ನಿರ್ದೇಶಕಿ ಕವಿತಾ ಪಾಟೀಲ, ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ. ಅಂಬಾರಾಯ ರುದ್ರವಾಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಆರ್ ಸಿ.ಹೆಚ್.ಒ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ ಕುಲಕರ್ಣಿ, ಜಿಲ್ಲಾ ಕಾಲರಾ ನಿಯಂತ್ರಣ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಬಸವರಾಜ ಗುಳಗಿ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಸುರೇಶ ಮೇಕಿನ್, ತಾಲೂಕ ಆರೋಗ್ಯ ಅಧಿಕಾರಿ ಡಾ.ಮಾರುತಿ ಕಾಂಬಳೆ, ಡಾ. ಸಿದ್ದು ಪಾಟೀಲ, ಡಾ. ಅಮರದೀಪ್ ಪವಾರ, ಡಾ. ರಾಕೇಶ ಕಾಂಬಳೆ, ಡಾ.ರವಿಕಿರಣ, ಡಾ. ಸುಶೀಲ ಕುಮಾರ ಅಂಬೂರೆ, ಡಾ. ಮಹ್ಮದ ಗಫಾರ, ಜಿಲ್ಲಾ ಕ್ಷಯರೋಗ ಕಾರ್ಯಕ್ರಮ ಸಂಯೋಕ ಅಬ್ದುಲ್‍ಜಬ್ಬಾರ, ಜಿಲ್ಲಾ ಖಾಸಗಿ ಮತ್ತು ಸರ್ಕಾರಿ ಸಂಯೋಜಕ ಶಶಿಧರ ಕಮಲಾಪೂರ, ಆರ್.ಸಿ.ಹೆಚ್.ಒ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿರೇಶ ಜವಳಗೇರಾ, ಜಿಲ್ಲಾ ಲೆಕ್ಕ ಪತ್ರ ವ್ಯವಸ್ಥಾಪಕ ಜನಾನಂದ ಪಾಟೀಲ ಹಾಗೂ ಇತರ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.