ಜು. 08 ರಂದು ಜಿಲ್ಲೆಯಾದ್ಯಂತ ಲೋಕ ಅದಾಲತ ಆಯೋಜನೆ:ನ್ಯಾ. ಪ್ರಭು ಎನ್ ಬಡಿಗೇರ

ಬೀದರ, ಜೂ.8: ರಾಷ್ಟ್ರೀಯ ಹಾಗೂ ರಾಜ್ಯ ಲೋಕ ಅದಾಲತ ಪ್ರಾಧಿಕಾರದ ನಿರ್ದೇಶದಂತೆ ಜುಲೈ 08 ರಂದು ಜಿಲ್ಲೆಯ ಎಲ್ಲಾ ನ್ಯಾಲಯಗಳಲ್ಲಿ ಲೋಕ ಅದಾಲತ ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್ ಬಡಿಗೇರ ಹೇಳಿದರು.

ಅವರು ಬುಧವಾರ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಛೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಲೋಕ ಅದಾಲತನಲ್ಲಿ ನ್ಯಾಯಲಯದಲ್ಲಿ ಪ್ರಸುತ್ತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ, ಜೀವನಾಂಶ, ಚೆಕ್ ಬಾನ್ಸ್, ವಿದ್ಯುತ ಪ್ರಕರಣಗಳು, ಕಂದಾಯ, ಬ್ಯಾಂಕ್, ವಿವಾಹ ವಿಚ್ಛೇದÀನ ಸಂಬಂದಿಸಿದ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಇರುತ್ತದೆ ಎಂದು ಹೇಳಿದರು.

ಈ ಹಿಂದೆ ಫೆಬ್ರವರಿ 11 ರಂದು ನಡೆದ ಲೋಕ ಅದಾಲತನಲ್ಲಿ ಜಿಲ್ಲೆಯಲ್ಲಿ 19,190 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರೆಸಿದ್ದು. ಒಟ್ಟು 11,79,31,345 ರೂ.ಗಳನ್ನು ಪರಿಹಾರ ಮತ್ತು ವಸೂಲಾತಿ ಮೂಲಕ ಕಕ್ಷಿದಾರರಿಗೆ ಹಣ ಕೊಡಿಸಲಾಗಿದೆ. ಈ 19190 ಪ್ರಕರಣಗಳಲ್ಲಿ 13947 ಪ್ರಕರಣಗಳು ನ್ಯಾಯಲಯದಲ್ಲಿ ಬಾಕಿ ಇರುವ ಪ್ರಕರಣಗಳಾಗಿದ್ದವು ಇವುಗಳನ್ನು ಇತ್ಯರ್ಥಪಡಿಸಿ ಒಟ್ಟು 6,77,28,578 ರೂ. ಪರಿಹಾರ ಒದಗಿಸಲಾಗಿದೆ ಎಂದರು. ಈ ಬಾರಿಯ ಲೋಕ ಅದಾಲತನಲ್ಲಿ ನ್ಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸಲು ಯೋಜನೆ ರೂಪಿಸಲಾಗಿದೆ. 2023ರ ಮೇ 01 ರವರೆಗೆ ಜಿಲ್ಲೆಯಲ್ಲಿ ಒಟ್ಟು 25086 ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಬಾಕಿ ಇವೆ ಎಂಬ ಮಾಹಿತಿ ಇದೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತನಲ್ಲಿ ಇತ್ಯರ್ಥ ಪಡಿಸುವ ಗುರಿ ಇದೆ ಎಂದು ಹೇಳಿದರು.

ಲೋಕ ಅದಾಲತನಲ್ಲಿ ರಾಜಿ ಮಾಡಿಕೊಳ್ಳುವ ಕಕ್ಷಿದಾರರಿಗೆ ನ್ಯಾಯಲಯದ ಶುಲ್ಕ ವಾಪಸ್ ಸಿಗಲಿದೆ ಹಾಗೂ ಲೋಕ ಅದಾಲತನಲ್ಲಿ ನಿರ್ಣಯವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇಬ್ಬರು ಪಕ್ಷಗಾರರು ಇಲ್ಲಿ ತಮ್ಮ ದ್ವೇಷ ಮರೆತು ಪ್ರಕರಣಗಳನ್ನು ಸುಮಧುರ ಬಾಂಧವ್ಯದೊಂದಿಗೆ ಇತ್ಯರ್ಥಪಡಿಸಿಕೊಳ್ಳಬಹುದು. ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಹೇಳಿದರು.

ಈ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮಹೇಶ ಕುಮಾರ ಶಿವಕುಮಾರ ಪಾಟೀಲ್, ಕಾರ್ಯದರ್ಶಿ ಪರಮೇಶ್ವರ ಬೊಂಬಳಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.