ಜು.೨೯ ವಸತಿನಿಲಯ ಹೊರಗುತ್ತಿಗೆ ಕಾರ್ಮಿಕರಿಗೆ ೩೫,೯೫೦ ರೂ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು,ಜು.೨೫- ಹಾಸ್ಟೆಲ್ ಕಾರ್ಮಿಕರ ವೇತನವನ್ನು ೩೫,೯೫೦ ಕ್ಕೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜುಲೈ ೨೯ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಶಾಸನ ಬದ್ಧ ಸೌಕರ್ಯಗಳನ್ನು ಒದಗಿಸಬೇಕು. ತುಟ್ಟಿ ಭತ್ಯೆಯನ್ನು ಬೆಲೆ ಏರಿಕೆ, ಹಣದುಬ್ಬರಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿ ನಿಗದಿ ಮಾಡಬೇಕು.ಕಾನೂನುಬದ್ಧವಾಗಿ ನೀಡಲೇಬೇಕಾದ ವಾರದ ರಜೆ ,ರಾಷ್ಟ್ರೀಯ ಹಬ್ಬಗಳ ರಜೆ,ಸಾಂಧರ್ಭಿಕ ರಜೆಗಳನ್ನು ನೀಡಬೇಕು ಅಥವಾ ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ ನೀಡಬೇಕು.ದಿನಕ್ಕೆ ೮ ಗಂಟೆಗಳ ಅವಧಿ ಮಾತ್ರ ದುಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
೮ ಗಂಟೆಗಳ ನಂತರದ ಹೆಚ್ಚುವರಿ ಅವಧಿಯ ಕೆಲಸಕ್ಕೆ ಕಾರ್ಮಿಕ ಕಾನೂನುಗಳ ಪ್ರಕಾರ ದುಪ್ಪಟ್ಟು ವೇತನ ನೀಡಬೇಕು.ಲಾಕ್ ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕು. ಮಾಸಿಕ ವೇತನ,ಇಪಿಎಫ್ ಮತ್ತು ಇಎಸ್‌ಐ ವಂತಿಗೆ ಪ್ರತಿ ತಿಂಗಳು ಗುತ್ತಿಗೆ ಏಜೆನ್ಸಿಯಿಂದ ಕಾರ್ಮಿಕರ ಖಾತೆಗಳಿಗೆ ಪಾವತಿಸಲು ಆಯಾ ಜಿಲ್ಲೆ , ತಾಲೂಕಿನ ಇಲಾಖೆಯ ಅಧಿಕಾರಿಗಳನ್ನು ಹೊಣೆ ಮಾಡಬೇಕು.ಪಾವತಿಸದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.ಗುತ್ತಿಗೆ ಏಜೆನ್ಸಿಯಿಂದ ಪ್ರತಿ ತಿಂಗಳು ವೇತನ ಪಾವತಿ ಚೀಟಿ ಕೊಡಿಸಬೇಕು ಮತ್ತು ಇಎಸ್‌ಐ ಕಾರ್ಡ್ ನೀಡದಿದ್ದಲ್ಲಿ,ಕೂಡಲೇ ಎಲ್ಲರಿಗೂ ನೀಡಬೇಕು.ವಸತಿಶಾಲೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ,ಅವರ ಕುಟುಂಬದೊಂದಿಗೆ ವಸತಿಶಾಲೆಯಲ್ಲಿ ಉಳಿದುಕೊಳ್ಳಲು ವಸತಿ ಕಟ್ಟಡ ಸೌಲಭ್ಯ ನೀಡಬೇಕು. ವಸತಿನಿಲಯ ವಸತಿಶಾಲೆ ಕಾಲೇಜು ಆಶ್ರಮಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಡಿ ಗ್ರೂಪ್ ನ ಅಡುಗೆಯವರು,ಅಡುಗೆ ಸಹಾಯಕರು,ಕಾವಲುಗಾರರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎನ್.ಎಸ್.ವೀರೇಶ್,ಮಹೇಶ್ ಚೀಕಲ ಪರ್ವಿ,ಅಣ್ಣಪ್ಪ ಇದ್ದರು.